ನವದೆಹಲಿ: ಕೇಂದ್ರ ಪ್ರೌಢಶಿಕ್ಷಣ ಮಂಡಳಿ (CBSE) ತನ್ನ 12ನೇ ತರಗತಿಯ ಫಲಿತಾಂಶೋತ್ತರ ಸೇವೆಗಳ ಪೋರ್ಟಲ್ ಅನ್ನು ಗುರಿಯಾಗಿಸಿಕೊಂಡು ನಡೆದಿರುವ ವ್ಯವಸ್ಥಿತ ಮತ್ತು ಸಂಘಟಿತ ಸೈಬರ್ ದಾಳಿಗಳ ಕುರಿತು ದೆಹಲಿ ಪೊಲೀಸರ ‘ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟಜಿಕ್ ಆಪರೇಷನ್ಸ್’ (IFSO) ಘಟಕಕ್ಕೆ ಶುಕ್ರವಾರ ಅಧಿಕೃತ ದೂರು ದಾಖಲಿಸಿದೆ.
ಆನ್‌ಸ್ಕ್ರೀನ್ ಮಾರ್ಕಿಂಗ್ (OSM) ವ್ಯವಸ್ಥೆಯ ಮೂಲಕ ಮೌಲ್ಯಮಾಪನ ಮಾಡಲಾದ ಉತ್ತರ ಪತ್ರಿಕೆಗಳ ಮರು-ಮೌಲ್ಯಮಾಪನ ಮತ್ತು ಅಂಕಗಳ ಪರಿಶೀಲನೆಗಾಗಿ ಜೂನ್ 2 ರಂದು ಈ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿತ್ತು. ಆದರೆ, ಕಳೆದ ಮೂರು ದಿನಗಳಿಂದ ಈ ಪ್ಲಾಟ್‌ಫಾರ್ಮ್ ಮೇಲೆ ಸರಣಿ ಸೈಬರ್ ದಾಳಿಗಳು ನಡೆಯುತ್ತಿವೆ ಎಂದು ಸಿಬಿಎಸ್‌ಇ ತಿಳಿಸಿದೆ.
ರಾಷ್ಟ್ರೀಯ ಹಿತಾಸಕ್ತಿಗೆ ಧಕ್ಕೆ ತರುವ ಸಂಚು
ದೇಶ ಮತ್ತು ವಿದೇಶಗಳ ವಿವಿಧ ಐಪಿ (IP) ವಿಳಾಸಗಳಿಂದ ಭಾರಿ ಪ್ರಮಾಣದ ದುರುದ್ದೇಶಪೂರಿತ ಟ್ರಾಫಿಕ್ (Malicious Traffic) ಹರಿಸುವ ಮೂಲಕ ಈ ದಾಳಿ ನಡೆಸಲಾಗಿದೆ. “ವೆಬ್‌ಸೈಟ್ ಅನ್ನು ನಿಷ್ಕ್ರಿಯಗೊಳಿಸುವುದು, ಅರ್ಹ ವಿದ್ಯಾರ್ಥಿಗಳಿಗೆ ಪೋರ್ಟಲ್ ಲಭ್ಯವಾಗದಂತೆ ತಡೆಯುವುದು ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳಿಂದ ಅನಧಿಕೃತವಾಗಿ ಮಾಹಿತಿ ಲೂಟಿ ಮಾಡುವುದು ಈ ದಾಳಿಯ ಮುಖ್ಯ ಉದ್ದೇಶವಾಗಿತ್ತು” ಎಂದು ಸಿಬಿಎಸ್‌ಇ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಅದೃಷ್ಟವಶಾತ್ ಯಾವುದೇ ರೀತಿಯ ಡೇಟಾ ಸೋರಿಕೆ (Data Breach) ಅಥವಾ ಅನಧಿಕೃತ ಪ್ರವೇಶ ಆಗಿಲ್ಲ ಎಂದು ಮಂಡಳಿ ಸ್ಪಷ್ಟಪಡಿಸಿದೆ.
2 ನಿಮಿಷದಲ್ಲಿ 15 ಲಕ್ಷ ಹಿಟ್ಸ್!
ಈ ಪೋರ್ಟಲ್‌ನ ಆರಂಭ ಮೊದಲಿನಿಂದಲೂ ಸುಲಭವಾಗಿರಲಿಲ್ಲ. ಮೇ 29 ರಂದು ಆರಂಭವಾಗಬೇಕಿದ್ದ ಪೋರ್ಟಲ್, ಜೂನ್ 1 ರ ಗಡುವನ್ನೂ ಮಿಸ್ ಮಾಡಿ, ಅಂತಿಮವಾಗಿ ಜೂನ್ 2 ರಂದು ನಸುಕಿನ ಜಾವ 4:30 ಕ್ಕೆ ಲೈವ್ ಆಗಿತ್ತು.
ಪೋರ್ಟಲ್ ಆರಂಭವಾದ ಕೆಲವೇ ನಿಮಿಷಗಳಲ್ಲಿ ‘ಡಿನಯಲ್ ಆಫ್ ಸರ್ವಿಸ್’ (DoS) ದಾಳಿ ನಡೆದಿದ್ದು, ಕೇವಲ ಎರಡು ನಿಮಿಷಗಳ ಅವಧಿಯಲ್ಲಿ ಬರೋಬ್ಬರಿ 15 ಲಕ್ಷಕ್ಕೂ ಅಧಿಕ ಹಿಟ್ಸ್ ದಾಖಲಿಸುವ ಮೂಲಕ ನೆಟ್‌ವರ್ಕ್ ಅನ್ನು ಜಾಮ್ ಮಾಡಲು ಯತ್ನಿಸಲಾಗಿತ್ತು. ಅಲ್ಲದೆ, ಫೈಲ್‌ಗಳನ್ನು ಕದಿಯಲು 1 ಲಕ್ಷಕ್ಕೂ ಹೆಚ್ಚು ಅನಧಿಕೃತ ಯತ್ನಗಳು ನಡೆದಿದ್ದವು ಎಂದು ಸಿಬಿಎಸ್‌ಇ ‘X’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿದೆ.
ವಿದ್ಯಾರ್ಥಿಗಳ ಆತಂಕ ಮತ್ತು ಸದ್ಯದ ಸ್ಥಿತಿ
“ಈ ಪೋರ್ಟಲ್‌ಗೆ ಅಡ್ಡಿಪಡಿಸುವುದರಿಂದ ಲಕ್ಷಾಂತರ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತೊಂದರೆಯಾಗುತ್ತದೆ. ಇದು ಸಾರ್ವಜನಿಕ ಅಶಾಂತಿ ಮತ್ತು ವಿದ್ಯಾರ್ಥಿಗಳಲ್ಲಿ ಮಂಡಳಿಯ ವಿರುದ್ಧ ಅಸಮಾಧಾನ ಮೂಡಿಸಲು ಕಾರಣವಾಗಬಹುದು” ಎಂದು ಸಿಬಿಎಸ್‌ಇ ಕಳವಳ ವ್ಯಕ್ತಪಡಿಸಿದೆ. ಜೂನ್ 4 ರವರೆಗಿನ ಅಂಕಿ-ಅಂಶಗಳ ಪ್ರಕಾರ, ಒಟ್ಟು 70,433 ಯಶಸ್ವಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಅದರಲ್ಲಿ 7,314 ಅಂಕಗಳ ಪರಿಶೀಲನೆಗೆ ಹಾಗೂ 63,119 ಮರು-ಮೌಲ್ಯಮಾಪನಕ್ಕೆ ಸಲ್ಲಿಕೆಯಾಗಿವೆ.
ದಾಳಿ ಹತ್ತಿಕ್ಕಿದ ಐಐಟಿ ಮತ್ತು ತಜ್ಞರ ತಂಡ
ಐಐಟಿ ಕಾನ್ಪುರ, ಐಐಟಿ ಮದ್ರಾಸ್, ಡಿಜಿಟಲ್ ಇಂಡಿಯಾ ಕಾರ್ಪೊರೇಷನ್, ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಷನ್ ಸೆಂಟರ್ (I4C), ಮತ್ತು CERT-In ನಂತಹ ದೇಶದ ಪ್ರಮುಖ ಸೈಬರ್ ಭದ್ರತಾ ಏಜೆನ್ಸಿಗಳ ನೆರವಿನೊಂದಿಗೆ 24×7 ನಿರಂತರ ಮೇಲ್ವಿಚಾರಣೆ ನಡೆಸಿ ಈ ಸೈಬರ್ ದಾಳಿಯನ್ನು ಯಶಸ್ವಿಯಾಗಿ ಹತ್ತಿಕ್ಕಲಾಗಿದೆ ಎಂದು ಸಿಬಿಎಸ್‌ಇ ಮಾಹಿತಿ ನೀಡಿದೆ.








