ನವದೆಹಲಿ: ದಾಂಪತ್ಯ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಸಹಜ ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂ ಕೋರ್ಟ್, ಪತ್ನಿಯೊಂದಿಗೆ ಕೆಲ ದಿನಗಳ ಕಾಲ ಮಾತನಾಡಲಿಲ್ಲ ಎಂಬ ಕಾರಣಕ್ಕೆ ಪತಿಯನ್ನು ಅಪರಾಧಿ ಎಂದು ಪರಿಗಣಿಸಲಾಗದು ಎಂದು ತಿಳಿಸಿದೆ. ಪತ್ನಿಯ ಆತ್ಮಹತ್ಯೆಯ ಪ್ರಕರಣದಲ್ಲಿ ಪತಿಗೆ ವಿಧಿಸಲಾಗಿದ್ದ ಶಿಕ್ಷೆಯನ್ನು ರದ್ದುಗೊಳಿಸಿ ನ್ಯಾಯಾಲಯವು ಅವರನ್ನು ದೋಷಮುಕ್ತಗೊಳಿಸಿದೆ.
ನ್ಯಾಯಮೂರ್ತಿ ಜೆ.ಕೆ. ಮಹೇಶ್ವರಿ ಮತ್ತು ಅತುಲ್ ಎಸ್. ಚಂದುರ್ಕರ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 498ಎ ಅಡಿಯಲ್ಲಿ ಕೆಳ ನ್ಯಾಯಾಲಯವು ವಿಧಿಸಿದ್ದ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಮದ್ರಾಸ್ ಹೈಕೋರ್ಟ್ ಎತ್ತಿಹಿಡಿದಿತ್ತು. ಇದನ್ನು ಸುಪ್ರೀಂ ಕೋರ್ಟ್ ಇದೀಗ ರದ್ದುಗೊಳಿಸಿದೆ. ಪತಿ 13 ದಿನಗಳ ಕಾಲ ಪತ್ನಿಯೊಂದಿಗೆ ಮಾತನಾಡದ ಕಾರಣಕ್ಕೆ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಆರೋಪಿಸಲಾಗಿತ್ತು.
ಪ್ರಾಸಿಕ್ಯೂಷನ್ (ಸರ್ಕಾರಿ ಪರ ವಕೀಲರು) ಯಾವುದೇ ಸಮಂಜಸವಾದ ಸಾಕ್ಷ್ಯಗಳಿಲ್ಲದೆ ಕ್ರೌರ್ಯದ ಆರೋಪವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. “ಈ ಪ್ರಕರಣದ ಸನ್ನಿವೇಶದಲ್ಲಿ, ಯಾವುದೇ ಪೂರಕ ಸಾಕ್ಷ್ಯಗಳಿಲ್ಲದೆ, 13 ದಿನಗಳ ಕಾಲ ಮೌನವಾಗಿದ್ದನ್ನು ಅಥವಾ ಮಾತನಾಡದಿರುವುದನ್ನು ಯಾವುದೇ ಕಾರಣಕ್ಕೂ ‘ಕ್ರೌರ್ಯ’ ಎಂದು ಕರೆಯಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ದಂಪತಿಗಳ ನಡುವೆ ಯಾವುದೇ ನಿರ್ದಿಷ್ಟ ಜಗಳ ನಡೆದಿದ್ದಕ್ಕೆ ಸಾಕ್ಷ್ಯಗಳಿಲ್ಲ ಎಂಬುದನ್ನು ಪೀಠ ಗಮನಿಸಿದೆ.
ಮೃತ ಮಹಿಳೆಯು ತನ್ನ ತವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ಮದುವೆಯ ಸಮಯದಲ್ಲಿ ಆಕೆಯ ಪೋಷಕರು 3 ಲಕ್ಷ ರೂಪಾಯಿ, 20 ಸಾರ್ವನ್ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ನೀಡಿದ್ದರು. ಪತಿಯು ಆಗಾಗ್ಗೆ ವರದಕ್ಷಿಣೆಗಾಗಿ ಬೇಡಿಕೆ ಇಡುತ್ತಿದ್ದನು ಮತ್ತು ಆಕೆ ತವರಿಗೆ ಹೋಗುವುದನ್ನು ವಿರೋಧಿಸುತ್ತಿದ್ದನು ಎಂಬುದು ಆರೋಪವಾಗಿತ್ತು. ಪತಿ ಫೋನ್ನಲ್ಲಿ ಮಾತನಾಡಲು ನಿರಾಕರಿಸುತ್ತಿದ್ದುದರಿಂದ ತೀವ್ರ ಮಾನಸಿಕ ನೋವುಂಟಾಗಿ ಆಕೆ ಆತ್ಮಹತ್ಯೆಗೆ ಶರಣಾಗಿದ್ದಳು ಎಂದು ಆರೋಪಿಸಿ, ಪತಿ, ಆತನ ಪೋಷಕರು ಮತ್ತು ಇಬ್ಬರು ಸಹೋದರರ ಮೇಲೆ ಐಪಿಸಿ ಸೆಕ್ಷನ್ 498ಎ ಮತ್ತು 304ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಆರೋಪಿತ ನಡವಳಿಕೆಯು ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸುವಷ್ಟು ಅಥವಾ ಆಕೆಯ ಮಾನಸಿಕ ಆರೋಗ್ಯಕ್ಕೆ ಅಪಾಯ ಉಂಟುಮಾಡುವಷ್ಟು ಗಂಭೀರವಾಗಿದೆಯೇ ಎಂಬುದನ್ನು ನ್ಯಾಯಾಲಯಗಳು ಪರಿಶೀಲಿಸಬೇಕು ಎಂದು ಕೋರ್ಟ್ ಒತ್ತಿಹೇಳಿದೆ.
ಆರೋಪಗಳನ್ನು ಸಮಂಜಸವಾದ ಸಂದೇಹವಿಲ್ಲದಂತೆ ಸಾಬೀತುಪಡಿಸುವ ಹೊಣೆಗಾರಿಕೆ ಪ್ರಾಸಿಕ್ಯೂಷನ್ ಮೇಲಿದೆ. ಆರೋಪಿ ತನ್ನ ಮೇಲಿನ ಆರೋಪಗಳನ್ನು ಸುಳ್ಳು ಎಂದು ಸಾಬೀತುಪಡಿಸಬೇಕಾದ ಅವಶ್ಯಕತೆಯಿಲ್ಲ ಎಂದು ಪೀಠ ಪುನರುಚ್ಚರಿಸಿದೆ.
ಪಾಸ್ಪೋರ್ಟ್ ಮತ್ತು ವೀಸಾ ಪ್ರಕ್ರಿಯೆ ಬಾಕಿ ಇದ್ದಿದ್ದರಿಂದ ಆಕೆ ಪತಿಯೊಂದಿಗೆ ಮಸ್ಕತ್ಗೆ ತೆರಳಲು ಸಾಧ್ಯವಾಗಿರಲಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ. ಪತಿ 13 ದಿನಗಳ ಕಾಲ ಪತ್ನಿಯೊಂದಿಗೆ ಮಾತನಾಡಿರಲಿಲ್ಲ ಎಂಬ ಆರೋಪವನ್ನು ಪ್ರಸ್ತಾಪಿಸಿದ ಸುಪ್ರೀಂ ಕೋರ್ಟ್, ಇಂತಹ ನಡವಳಿಕೆಯು ಕ್ರೌರ್ಯ ಅಥವಾ ಕಿರುಕುಳಕ್ಕೆ ಸಂಬಂಧಿಸಿದ ಪುರಾವೆಗಳಿಲ್ಲದೆ, ಸೆಕ್ಷನ್ 498ಎ ಅಡಿಯಲ್ಲಿ ಅಪರಾಧವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಈ ತೀರ್ಪಿನ ಮೂಲಕ, ದಾಂಪತ್ಯ ಕಲಹಗಳಲ್ಲಿ ಕ್ರೌರ್ಯವನ್ನು ಸಾಬೀತುಪಡಿಸಲು ಅಗತ್ಯವಿರುವ ಸಾಕ್ಷ್ಯಾಧಾರಗಳ ಮಾನದಂಡಗಳ ಬಗ್ಗೆ ಸುಪ್ರೀಂ ಕೋರ್ಟ್ ಸ್ಪಷ್ಟತೆಯನ್ನು ನೀಡಿದೆ.








