ಬೆಂಗಳೂರು: ಅಭಿವೃದ್ಧಿ ಹೊಂದುತ್ತಿರುವ ಶಿವಮೊಗ್ಗ ನಗರದ ಕುವೆಂಪು ನಗರದ ನಿವಾಸಿಗಳಿಗೆ ತೀವ್ರ ತೊಂದರೆ ಉಂಟುಮಾಡಿರುವ ಸರ್ಕಾರಿ ಕೆರೆ ಒತ್ತುವರಿ ಪ್ರಕರಣವನ್ನು ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ‘ನ್ಯೂಸ್ ವಾರಿಯರ್ಸ್’ ದಿನಪತ್ರಿಕೆಯಲ್ಲಿ ಪ್ರಕಟವಾದ ತನಿಖಾ ವರದಿಯನ್ನೇ ಮೂಲ ವಸ್ತುವಾಗಿ ಸ್ವೀಕರಿಸಿರುವ ಉಪಲೋಕಾಯುಕ್ತರಾದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು, ಭ್ರಷ್ಟ ಮತ್ತು ಕರ್ತವ್ಯಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಸ್ವಯಂ ಪ್ರೇರಿತ (ಸುಮೋಟೋ) ಪ್ರಕ್ರಿಯೆಗಳನ್ನು ಆರಂಭಿಸಿ ಅದೇಶ ಹೊರಡಿಸಿದ್ದಾರೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕಲಂ 7(2) ಸಹವಾಚಿ ಕಲಂ 9(3)(ಎ) ಅಡಿಯಲ್ಲಿ ಜೂನ್ 4, 2026 ರಂದು ಈ ಮಹತ್ವದ ತನಿಖಾ ಆದೇಶವನ್ನು ಹೊರಡಿಸಲಾಗಿದೆ.
ಪ್ರಕರಣದ ಹಿನ್ನೆಲೆ: ಏನಿದು ಕೆರೆ ಕಬಳಿಕೆ ಹಗರಣ?
ಶಿವಮೊಗ್ಗ ತಾಲ್ಲೂಕು ಕಸಬಾ ಹೋಬಳಿ ನವುಲೆ ಗ್ರಾಮದ ಸರ್ವೆ ನಂಬರ್ 110ರಲ್ಲಿರುವ ಸರ್ಕಾರಿ ಕೆರೆಯನ್ನು ಖಾಸಗಿ ವ್ಯಕ್ತಿಯೊಬ್ಬ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾನೆ. ಕಾನೂನುಬಾಹಿರವಾಗಿ ಕೆರೆ ಜಾಗದಲ್ಲಿ ಬೃಹತ್ ಗೋಡೌನ್ ನಿರ್ಮಿಸಿ, ಅದನ್ನು ಬಾಡಿಗೆಗೆ ನೀಡಿ ಹಣ ಮಾಡುತ್ತಿದ್ದಾನೆ. ಅಷ್ಟೇ ಅಲ್ಲದೆ, ಇಡೀ ಕೆರೆಗೆ ಕಾಂಪೌಂಡ್ ಗೋಡೆ ನಿರ್ಮಿಸಿ ಅದು ತನ್ನದೇ ಸ್ವಂತ ಆಸ್ತಿ ಎಂಬಂತೆ ವರ್ತಿಸುತ್ತಿದ್ದಾನೆ.
ಸಾವಿರಾರು ಮನೆಗಳಿರುವ ಈ ಭಾಗದಲ್ಲಿ ಮಳೆಗಾಲದ ನೀರೆಲ್ಲಾ ಶೇಖರಣೆಯಾಗುವುದು ಇದೇ ಕೆರೆಯಲ್ಲಿ. ಕೆರೆ ಒತ್ತುವರಿಯಾಗಿರುವುದರಿಂದ ಮಳೆ ನೀರು ಸರಾಗವಾಗಿ ಹರಿಯಲು ಜಾಗವಿಲ್ಲದೆ ಸ್ಥಳೀಯ ನಿವಾಸಿಗಳ ಮನೆಗಳಿಗೆ ನೀರು ನುಗ್ಗಿ ಹಾನಿಯಾಗುವ ಭೀತಿ ಎದುರಾಗಿದೆ. ಈ ಬಗ್ಗೆ ಸಾರ್ವಜನಿಕರು ತಾಲ್ಲೂಕು ಆಡಳಿತ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಕಾಗಕ್ಕ-ಗುಬ್ಬಕ್ಕ ಕಥೆ ಕೇಳಿ ವಾಪಸ್ಸಾದ ಅಧಿಕಾರಿಗಳು!
ಸ್ಥಳೀಯರ ಆಕ್ರೋಶಕ್ಕೆ ಮಣಿದು ಕಂದಾಯ ಇಲಾಖೆ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಪೊಲೀಸರೊಂದಿಗೆ ಎರಡು ಮೂರು ಬಾರಿ ಸ್ಥಳಕ್ಕೆ ಭೇಟಿ ನೀಡಿ ಸರ್ವೇ ನಡೆಸಿ, ಒತ್ತುವರಿಯಾಗಿರುವುದನ್ನು ದೃಢಪಡಿಸಿದ್ದರು. ಒಮ್ಮೆ ಖುದ್ದು ಉಪವಿಭಾಗಾಧಿಕಾರಿಗಳು (AC) ಸ್ಥಳಕ್ಕೆ ಬಂದಿದ್ದರೂ ಸಹ, ಒತ್ತುವರಿದಾರನ ‘ಕಾಗಕ್ಕ ಗುಬ್ಬಕ್ಕ’ ಕಥೆಗಳನ್ನು ಕೇಳಿಕೊಂಡು, ತೆರವು ಕಾರ್ಯ ಮಾಡದೆಯೇ ವಾಪಸ್ಸಾಗಿದ್ದರು.
“ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಗುರುತು ಮಾಡಿದ್ದ ಜಾಗದ ಮಾರ್ಕ್‌ಗಳನ್ನು ಒತ್ತುವರಿದಾರ ಮುಲಾಜಿಲ್ಲದೆ ಅಳಿಸಿ ಹಾಕಿದ್ದರೂ ಸಹ ತಾಲ್ಲೂಕು ಆಡಳಿತ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಶಿವಮೊಗ್ಗ ಜಿಲ್ಲಾಧಿಕಾರಿಗಳು ಖುದ್ದಾಗಿ ಸೂಚನೆ ನೀಡಿದ್ದರೂ, ತಹಶೀಲ್ದಾರ್ ಅವರು ಮರಳು-ಮಣ್ಣಿನ ವ್ಯವಹಾರದಲ್ಲಿ ಬ್ಯುಸಿಯಾಗಿದ್ದುಕೊಂಡು ಕೆರೆ ಸಂರಕ್ಷಣೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಕೊನೆಗೆ ಅಧಿಕಾರಿಗಳು ನ್ಯಾಯಾಲಯದ ನೆಪ ಹೇಳಿ ಕಾಲಹರಣ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.”
ದುರಾಡಳಿತ ಎಂದು ಪರಿಗಣಿಸಿದ ಉಪಲೋಕಾಯುಕ್ತರು
ಈ ಇಡೀ ಪ್ರಕರಣವನ್ನು ಸೂಕ್ಷ್ಮವಾಗಿ ಅವಲೋಕಿಸಿದ ಮಾನ್ಯ ಉಪಲೋಕಾಯುಕ್ತರು, ಸಂವಿಧಾನದ ವಿಧಿ 21ರ ಅನ್ವಯ ನಾಗರಿಕರಿಗೆ ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣದಲ್ಲಿ ಜೀವಿಸುವ ಮೂಲಭೂತ ಹಕ್ಕಿದೆ ಎಂಬುದನ್ನು ಎತ್ತಿಹಿಡಿದಿದ್ದಾರೆ. ಕೆರೆಗಳು ಮತ್ತು ಜಲಮೂಲಗಳನ್ನು ಸಂರಕ್ಷಿಸುವುದು ಅಧಿಕಾರಿಗಳ ಕಡ್ಡಾಯ ಕರ್ತವ್ಯವಾಗಿದೆ. ಜವಾಬ್ದಾರಿಯಿಂದ ನುಣುಚಿಕೊಳ್ಳುವ ಅಧಿಕಾರಿಗಳ ಇಂತಹ ನಿಷ್ಕ್ರಿಯತೆಯನ್ನು ಕರ್ನಾಟಕ ಲೋಕಾಯುಕ್ತ ಕಾಯ್ದೆ ಕಲಂ 2(10)ರ ಅಡಿಯಲ್ಲಿ ‘ದುರಾಡಳಿತ’ ಎಂದು ಪರಿಗಣಿಸಲಾಗಿದೆ.
ಆರು ಜನ ಪ್ರಮುಖ ಅಧಿಕಾರಿಗಳಿಗೆ ನೋಟಿಸ್ ಜಾರಿ
ಈ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ಕಂದಾಯ ಹಾಗೂ ಪಾಲಿಕೆಯ ಕೆಳಕಂಡ ಅಧಿಕಾರಿಗಳನ್ನು ಎದುರುದಾರರೆಂದು ಪರಿಗಣಿಸಿ ಲೋಕಾಯುಕ್ತ ಸಂಸ್ಥೆಯು ನೋಟಿಸ್ ಜಾರಿ ಮಾಡಿದೆ:
-
ಐ. ಬಿ. ಮೋಹನ್‌ಕುಮಾರ್ – ಗ್ರಾಮ ಆಡಳಿತ ಅಧಿಕಾರಿ (VA), ನವುಲೆ, ಶಿವಮೊಗ್ಗ.
-
ಶಿವಮೂರ್ತಿ – ಕಂದಾಯ ನಿರೀಕ್ಷಕರು (RI), ನವುಲೆ.
-
ರಾಜೀವ್ – ತಹಶೀಲ್ದಾರ್, ಶಿವಮೊಗ್ಗ ಜಿಲ್ಲೆ.
-
ಸತ್ಯನಾರಾಯಣ – ಉಪವಿಭಾಗಾಧಿಕಾರಿಗಳು (AC), ಶಿವಮೊಗ್ಗ.
-
ಲಕ್ಷ್ಮಿ ಎಂ.ಪಿ. – ಸಹಾಯಕ ಕಾರ್ಯಪಾಲಕ ಅಭಿಯಂತರರು, ಶಿವಮೊಗ್ಗ ಮಹಾನಗರ ಪಾಲಿಕೆ.
-
ಶಿವಕುಮಾರ್ – ಸಹಾಯಕ ಕಾರ್ಯಪಾಲಕ ಅಭಿಯಂತರರು, ಶಿವಮೊಗ್ಗ ಮಹಾನಗರ ಪಾಲಿಕೆ.
ನಾಲ್ಕು ವಾರಗಳಲ್ಲಿ ತನಿಖಾ ವರದಿ ಸಲ್ಲಿಕೆಗೆ ಗಡುವು
ಉಪಲೋಕಾಯುಕ್ತರು ಪ್ರಸ್ತುತ ಸ್ಥಿತಿಗತಿಯ ಸತ್ಯಾಸತ್ಯತೆಗಳನ್ನು ಅರಿಯಲು ಕರ್ನಾಟಕ ಲೋಕಾಯುಕ್ತದ ಶಿವಮೊಗ್ಗ ಪೊಲೀಸ್ ಉಪಾಧೀಕ್ಷಕರಿಗೆ (DySP) ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ. ಸೂಕ್ತ ದಾಖಲೆಗಳು ಹಾಗೂ ಛಾಯಾಚಿತ್ರಗಳೊಂದಿಗೆ (Photos) ಸವಿಸ್ತಾರವಾದ ವರದಿಯನ್ನು ನೋಟಿಸ್ ತಲುಪಿದ ನಾಲ್ಕು ವಾರಗಳ ಒಳಗಾಗಿ ಸಲ್ಲಿಕೆಗೆ ಗಡುವು ವಿಧಿಸಲಾಗಿದೆ.
ಅಲ್ಲದೆ, ಮುಂದಿನ ಸೂಕ್ತ ಕ್ರಮಗಳಿಗಾಗಿ ಈ ಆದೇಶದ ಪ್ರತಿಯನ್ನು ಶಿವಮೊಗ್ಗ ಜಿಲ್ಲೆಯ ಜಿಲ್ಲಾ ಉಸ್ತುವಾರಿ ಸಚಿವರಿಗೂ ರವಾನಿಸಲಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ದಿನಾಂಕ: 09.07.2026 ಕ್ಕೆ ನಿಗದಿಪಡಿಸಲಾಗಿದೆ.








BREAKING: ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ: ‘ಟ್ರಾನ್ಸ್ ಪೋರ್ಟ್’ಗೆ ಸಂಬಂಧಿಸಿದ ವಸ್ತುಗಳು ಸುಟ್ಟು ಭಸ್ಮ
ಗೃಹ ಪ್ರವೇಶದ 2ನೇ ದಿನವೇ ಕಾಂಗ್ರೆಸ್ ಪಕ್ಷದ ಮನೆಯ ಚಾವಣಿ ಕುಸಿದು ಬಿದ್ದಿದೆ: ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ








