ನವದೆಹಲಿ: ಪಂಜಾಬ್ನ ಮೊಹಾಲಿಯಲ್ಲಿ ಬೆಚ್ಚಿಬೀಳಿಸುವ ಹತ್ಯೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾಜಿ ಪ್ರೇಯಸಿಯೊಂದಿಗೆ ಮತ್ತೆ ಸಂಬಂಧ ಬೆಳೆಸಲು ವಿಫಲವಾದ ಯುವಕ, ಆಕೆಯ ಕಚೇರಿಗೆ ನುಗ್ಗಿ ಸಹೋದ್ಯೋಗಿಗಳ ಕಣ್ಣೆದುರೇ ಚಾಕುವಿನಿಂದ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದ್ದು, ಕಚೇರಿಯ ಸಿಸಿಟಿವಿ ಕ್ಯಾಮೆರಾಗಳಲ್ಲೂ ಸಂಪೂರ್ಣ ದೃಶ್ಯ ಸೆರೆಯಾಗಿದೆ.
ಮೃತ ಯುವತಿಯನ್ನು ಡಿಂಪಲ್ ಎಂದು ಗುರುತಿಸಲಾಗಿದ್ದು, ಅವರು ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆರೋಪಿಯನ್ನು ಹರ್ವಿಂದರ್ ಮಾನ್ ಅಲಿಯಾಸ್ ಹ್ಯಾರಿ ಎಂದು ಪೊಲೀಸರು ಗುರುತಿಸಿದ್ದಾರೆ. ಗುರುವಾರ ಸಂಜೆ ಸುಮಾರು 7:40ರ ವೇಳೆಗೆ ಹ್ಯಾರಿ ಕಚೇರಿಯೊಳಗೆ ಪ್ರವೇಶಿಸಿ, ಕೆಲಸದಲ್ಲಿ ತೊಡಗಿದ್ದ ಡಿಂಪಲ್ ಅವರ ಮೇಲೆ ಹಠಾತ್ ದಾಳಿ ನಡೆಸಿದ್ದಾನೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಡಿಂಪಲ್ ಅವರನ್ನು ಹಿಂದಿನಿಂದ ಚಾಕುವಿನಿಂದ ಇರಿದ ಆರೋಪಿ, ಅವರು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೂದಲು ಹಿಡಿದು ಎಳೆದು ಮತ್ತಷ್ಟು ದಾಳಿ ನಡೆಸಿದ್ದಾನೆ. ಅಲ್ಲಿದ್ದ ಸಿಬ್ಬಂದಿ ಮಧ್ಯಪ್ರವೇಶಿಸಿ ತಡೆಯಲು ಪ್ರಯತ್ನಿಸಿದರೂ, ಆರೋಪಿ ಹಿಂಜರಿಯದೆ ನಿರಂತರವಾಗಿ ಹಲ್ಲೆ ಮುಂದುವರಿಸಿದ್ದಾನೆ. ಯುವತಿಯ ಮೇಲೆ ಸುಮಾರು 20 ಬಾರಿ ಚಾಕು ಇರಿದಿರುವುದಾಗಿ ತಿಳಿದುಬಂದಿದೆ.
ಹತ್ಯೆಯ ಬಳಿಕ ಆರೋಪಿ ಆತ್ಮಹತ್ಯೆಗೆ ಯತ್ನ
ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಹ್ಯಾರಿ ತನ್ನ ಜೀವವನ್ನೂ ಕೊನೆಗಾಣಿಸಲು ಪ್ರಯತ್ನಿಸಿದ್ದಾನೆ. ಅದೇ ಚಾಕುವಿನಿಂದ ತನ್ನ ಕುತ್ತಿಗೆಯ ಭಾಗಕ್ಕೆ ಅನೇಕ ಬಾರಿ ಗಾಯ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ವೈದ್ಯಕೀಯ ಸಿಬ್ಬಂದಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೂರು ವರ್ಷಗಳ ಪ್ರೇಮ, ಬ್ರೇಕಪ್ ಬಳಿಕ ಹೆಚ್ಚಿದ ವೈಮನಸ್ಸು
ಡಿಂಪಲ್ ಮೂಲತಃ ಪಟಿಯಾಲಾ ನಿವಾಸಿಯಾಗಿದ್ದರು. ಡಿಂಪಲ್ ಮತ್ತು ಹ್ಯಾರಿ ಸುಮಾರು ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಇತ್ತೀಚೆಗೆ ಇಬ್ಬರ ನಡುವಿನ ಸಂಬಂಧ ಮುರಿದುಬಿದ್ದಿತ್ತು. ಬ್ರೇಕಪ್ ಆದ ನಂತರವೂ ಡಿಂಪಲ್ ಜೊತೆ ಮತ್ತೆ ಸಂಬಂಧ ಮುಂದುವರಿಸಲು ಹ್ಯಾರಿ ಹಲವು ಪ್ರಯತ್ನಗಳನ್ನು ನಡೆಸಿದ್ದಾನೆ. ಆದರೆ ಆ ಪ್ರಯತ್ನಗಳು ಫಲಿಸದ ಹಿನ್ನೆಲೆಯಲ್ಲಿ ಆತ ಕೋಪ ಮತ್ತು ನಿರಾಶೆಯಿಂದ ಈ ಕೃತ್ಯ ಎಸಗಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಸಿಸಿಟಿವಿಯಲ್ಲಿ ಸೆರೆಯಾದ ಭಯಾನಕ ದೃಶ್ಯ
ಈ ಸಂಪೂರ್ಣ ಘಟನೆ ಕಚೇರಿಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದ್ದು, ಪೊಲೀಸರು ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
#Watch | A woman working at a private company in Punjab's Mohali was stabbed to death by her colleague – believed to be her ex-boyfriend – in the office after an argument over their relationship status. The accused, identified as Harvinder Mann alias Harry, later attempted to die… pic.twitter.com/dYW3aijIJ5
— NDTV (@ndtv) June 5, 2026








