ಬೆಂಗಳೂರು: ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ಭೀಕರ ದುರಂತವೊಂದು ಸಂಭವಿಸಿದ್ದು, ರಾಸಾಯನಿಕಯುಕ್ತ ಬಾಯ್ಲರ್ ಸ್ವಚ್ಛಗೊಳಿಸಲು ಇಳಿದ ಇಬ್ಬರು ಉತ್ತರ ಪ್ರದೇಶ ಮೂಲದ ಕಾರ್ಮಿಕರು ಉಸಿರುಗಟ್ಟಿ, ಕೆಮಿಕಲ್ ರಿಯಾಕ್ಷನ್ನಿಂದಾಗಿ ಡ್ರೈನೇಜ್ಗೆ ಬಿದ್ದು ದಾರುಣವಾಗಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮತ್ತಿಬ್ಬರು ಕಾರ್ಮಿಕರು ತೀವ್ರವಾಗಿ ಅಸ್ವಸ್ಥಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.
ಉತ್ತರ ಪ್ರದೇಶ ಮೂಲದ ಮುನ್ನಾ ಸಿಂಗ್ (45) ಹಾಗೂ ಲಾಲು ಸಿಂಗ್ (40) ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇನ್ನುಳಿದಂತೆ ಸುಮಿತ್ ಮಂಡಲ್ ಮತ್ತು ವಿಜಯ್ ಕುಮಾರ್ ಸಿಂಗ್ ಎಂಬ ಕಾರ್ಮಿಕರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತಕ್ಷಣವೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕತ್ತಲಲ್ಲೇ ನಡೆದ ಸ್ವಚ್ಛತಾ ಕಾರ್ಯ
ಜಿಗಣಿ ಕೈಗಾರಿಕಾ ಪ್ರದೇಶದಲ್ಲಿರುವ ‘ಕುಮಾರ್ ಆರ್ಗ್ಯಾನಿಕ್ಸ್’ ಕಾರ್ಖಾನೆಯಲ್ಲಿ ಈ ಘಟನೆ ನಡೆದಿದೆ. ಸಂಜೆ ವೇಳೆ ಕತ್ತಲಾಗಿದ್ದರೂ ಯಾವುದೇ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ, ಬಾಯ್ಲರ್ ಒಳಗೆ ಸಂಗ್ರಹವಾಗಿದ್ದ ರಾಸಾಯನಿಕ ತ್ಯಾಜ್ಯವನ್ನು ಸ್ವಚ್ಛಗೊಳಿಸಲು ಕಾರ್ಮಿಕರನ್ನು ಇಳಿಸಲಾಗಿತ್ತು. ತೀವ್ರವಾದ ರಾಸಾಯನಿಕ ಪ್ರಕ್ರಿಯೆ (ಕೆಮಿಕಲ್ ರಿಯಾಕ್ಷನ್) ನಡೆದ ಪರಿಣಾಮ ಕಾರ್ಮಿಕರು ಉಸಿರುಗಟ್ಟಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಡ್ರೈನೇಜ್ಗೆ ಬಿದ್ದಿದ್ದಾರೆ ಎನ್ನಲಾಗಿದೆ.
ಸುರಕ್ಷತಾ ಕ್ರಮಗಳ ಸಂಪೂರ್ಣ ನಿರ್ಲಕ್ಷ್ಯ
ಸ್ವಚ್ಛತಾ ಕಾರ್ಯಕ್ಕೆ ಇಳಿಯುವ ಮುನ್ನ ಕಾರ್ಮಿಕರಿಗೆ ಯಾವುದೇ ರೀತಿಯ ಗ್ಯಾಸ್ ಮಾಸ್ಕ್ ಆಗಲಿ, ರಕ್ಷಣಾತ್ಮಕ ಉಡುಪುಗಳಾಗಲಿ (PPE Kits) ನೀಡಿರಲಿಲ್ಲ ಎನ್ನುವುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಮೃತಪಟ್ಟ ಕಾರ್ಮಿಕರು ಕೇವಲ ತಮ್ಮ ಅಂಗಿಗಳನ್ನು ಕಳಚಿ ನೇರವಾಗಿ ಅಪಾಯಕಾರಿ ಬಾಯ್ಲರ್ ಒಳಗೆ ಇಳಿದಿದ್ದರು. ಕಾರ್ಖಾನೆ ಆಡಳಿತ ಮಂಡಳಿಯ ಇಂತಹ ಬೇಜವಾಬ್ದಾರಿತನವೇ ಇಬ್ಬರು ಬಡ ಕಾರ್ಮಿಕರ ಸಾವಿಗೆ ನೇರ ಕಾರಣ ಎಂದು ಆರೋಪಿಸಲಾಗಿದೆ.
ಆಸ್ಪತ್ರೆ ಮುಂಭಾಗ ಸಹೋದ್ಯೋಗಿಗಳ ಆಕ್ರೋಶ
ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಆವರಣದಲ್ಲಿ ಮೃತರ ಸಹಪಾಠಿಗಳು ಹಾಗೂ ಕಾರ್ಖಾನೆಯ ಇತರೆ ಕಾರ್ಮಿಕರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿದರು. ಸೂಕ್ತ ಸುರಕ್ಷತಾ ಪರಿಕರಗಳನ್ನು ನೀಡದೆ ಕಾರ್ಮಿಕರ ಜೀವದ ಜೊತೆ ಚೆಲ್ಲಾಟವಾಡಿದ ಕಾರ್ಖಾನೆಯ ಮಾಲೀಕರು ಮತ್ತು ಆಡಳಿತ ಮಂಡಳಿಯ ವಿರುದ್ಧ ಕಾರ್ಮಿಕರು ಹಿಡಿಶಾಪ ಹಾಕುತ್ತಾ, ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸ್ಥಳಕ್ಕೆ ಜಿಗಣಿ ಪೊಲೀಸರ ಭೇಟಿ
ವಿಷಾದನೀಯ ಘಟನೆಯ ಮಾಹಿತಿ ಸಿಗುತ್ತಿದ್ದಂತೆ ಜಿಗಣಿ ಠಾಣೆಯ ಪೊಲೀಸರು ಮತ್ತು ಡಿವೈಎಸ್ಪಿ ಗೋಪಾಲ್ ನಾಯಕ್ ಅವರು ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆ ನಡೆದ ಬಾಯ್ಲರ್ ಘಟಕವನ್ನು ವೀಕ್ಷಿಸಿದ ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ. ಈ ಸಂಬಂಧ ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿರ್ಲಕ್ಷ್ಯದ ಆರೋಪದಡಿ ತನಿಖೆ ಮುಂದುವರಿದಿದೆ.








