ಬೆಂಗಳೂರು: ಬೆಂಗಳೂರಿನ ಗ್ರಾಮ ದೇವತೆ ಅಣ್ಣಮ್ಮ ದೇವಿ ದೇವಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಶುಕ್ರವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ದೇವಿಯ ದರ್ಶನ ಪಡೆದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಅಣ್ಣಮ್ಮ ದೇವಿ ಬೆಂಗಳೂರಿನ ಗ್ರಾಮ ದೇವತೆಯಾದರೆ, ಚಾಮುಂಡಿ ತಾಯಿ ನಾಡಿನ ದೇವತೆಯಾಗಿದ್ದಾರೆ. ತಾಯಿಯ ಆಶೀರ್ವಾದ ಪಡೆದು, ರಾಜ್ಯದಲ್ಲಿ ಉತ್ತಮ ಮಳೆ, ಬೆಳೆ ಆಗಲಿ ಹಾಗೂ ಜನರಲ್ಲಿ ಸಮೃದ್ಧಿ, ನೆಮ್ಮದಿ, ಶಾಂತಿ ನೆಲೆಸಲಿ ಎಂದು ಪ್ರಾರ್ಥಿಸಿ ನನ್ನ ಕೆಲಸ ಪ್ರಾರಂಭಿಸಿದ್ದೇನೆ” ಎಂದು ತಿಳಿಸಿದರು.
ಇದೇ ವೇಳೆ ಸಚಿವ ರಾಮಲಿಂಗಾ ರೆಡ್ಡಿ ಅವರ ರಾಜೀನಾಮೆ ಹಾಗೂ ಅಸಮಾಧಾನದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, “ರಾಮಲಿಂಗಾ ರೆಡ್ಡಿ ಅವರು ನಮ್ಮ ಪಕ್ಷದ ಪ್ರಮುಖ ನಾಯಕರು ಹಾಗೂ ನನಗೆ ಅತ್ಯಂತ ಆತ್ಮೀಯರು. ಈ ಕುರಿತು ನಾನು ಅವರೊಂದಿಗೆ ಖುದ್ದಾಗಿ ಮಾತನಾಡುತ್ತೇನೆ” ಎಂದರು.
ಮುಂದುವರಿದು ಮಾತನಾಡಿದ ಅವರು, “ರಾಮಲಿಂಗಾ ರೆಡ್ಡಿ ಅವರು ಗ್ರಾಮೀಣ ಭಾಗದಿಂದ ಬಂದವರಲ್ಲ. ಅವರಿಗೆ ಜಲಸಂಪನ್ಮೂಲ ಸಚಿವಾಲಯ ಸಿಕ್ಕಿದೆ, ಆದರೆ ಅವರು ನಗರ ಪ್ರದೇಶದಲ್ಲಿ ಕೆಲಸ ಮಾಡಲು ಬಯಸಿದ್ದಾರೆ” ಎಂದು ರಾಜೀನಾಮೆಗೆ ಕಾರಣವನ್ನು ಸ್ಪಷ್ಟಪಡಿಸಿದರು.








