ಬೆಂಗಳೂರು: ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅತ್ಯಂತ ಮಹತ್ವದ ಹಾಗೂ ಐತಿಹಾಸಿಕ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. ಆಡಳಿತಕ್ಕೆ ಹೊಸ ಸ್ಪರ್ಶ ನೀಡಲು ಹಾಗೂ ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಲು ದೇಶದಲ್ಲೇ ಮೊದಲ ಬಾರಿಗೆ ಎರಡು ಹೊಸ ಸಚಿವಾಲಯಗಳನ್ನು ಸ್ಥಾಪಿಸಲು ಮುಂದಾಗಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ವಿಧಾನಸೌಧದಲ್ಲಿ ಉನ್ನತಾಧಿಕಾರಿಗಳ ಮಹತ್ವದ ಸಭೆ ನಡೆಸಿದ ಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಕ್ರಾಂತಿಕಾರಿ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಲು, ಸಾರ್ವಜನಿಕರಿಂದ ಬರುವ ಅರ್ಜಿಗಳು, ವಿಚಾರಧಾರೆಗಳು ಮತ್ತು ಸಮಸ್ಯೆಗಳನ್ನು ಆಲಿಸಿ ಬಗೆಹರಿಸಲೆಂದೇ ವಿಶೇಷವಾಗಿ ಒಂದು ಪ್ರತ್ಯೇಕ ಸಚಿವಾಲಯವನ್ನು ಆರಂಭಿಸಲಾಗುತ್ತಿದೆ. ಇದಕ್ಕೆ ಒಬ್ಬರು ಪ್ರತ್ಯೇಕ ಸಚಿವರನ್ನೂ ನೇಮಿಸಲಾಗುವುದು. ಇಂತಹದ್ದೊಂದು ವಿಶಿಷ್ಟ ಪ್ರಯತ್ನ ಇಡೀ ದೇಶದಲ್ಲೇ ಮೊಟ್ಟಮೊದಲನೆಯದಾಗಿದೆ.
ಅನಿವಾಸಿ ಭಾರತೀಯರಿಗಾಗಿ (NRI) ಪ್ರತ್ಯೇಕ ಸಚಿವಾಲಯ
ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ತಾಯ್ನಾಡಿನೊಂದಿಗೆ ಬೆಸೆಯಲು ಮತ್ತು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಬಯಸುವ ಎನ್ಆರ್ಐಗಳಿಗೆ (NRI) ನೆರವಾಗಲು ಮತ್ತೊಂದು ಪ್ರತ್ಯೇಕ ಸಚಿವಾಲಯವನ್ನು ತೆರೆಯಲಾಗುತ್ತಿದೆ.
ಆರತಿ ಕೃಷ್ಣ ಅವರಿಗೆ ಒಲಿಯುತ್ತಾ ಸಚಿವ ಸ್ಥಾನ?: ನೂತನವಾಗಿ ಸೃಷ್ಟಿಸಲಾಗಿರುವ ಈ ಅನಿವಾಸಿ ಭಾರತೀಯರ ಸಚಿವಾಲಯದ ಜವಾಬ್ದಾರಿ ಕಾಂಗ್ರೆಸ್ ನಾಯಕಿ ಆರತಿ ಕೃಷ್ಣ ಅವರಿಗೆ ಸಿಗುವ ಸಾಧ್ಯತೆ ದಟ್ಟವಾಗಿದೆ. ವಿದೇಶದಲ್ಲಿರುವ ಕನ್ನಡಿಗರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಹಾಗೂ ಅವರ ಕಷ್ಟಗಳಿಗೆ ಸದಾ ಸ್ಪಂದಿಸುವ ಆರತಿ ಕೃಷ್ಣ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ ಎನ್ನಲಾಗಿದೆ.








