ಕೋಲಾರ: ಪತಿಯ ಅಕಾಲಿಕ ಸಾವಿನ ದುಃಖವನ್ನು ಸಹಿಸಿಕೊಳ್ಳಲಾಗದೆ ಮಾನಸಿಕವಾಗಿ ಕುಗ್ಗಿದ್ದ ಮಹಿಳೆಯೊಬ್ಬರು ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ಹತ್ಯೆಗೈದಿರುವ ದುರ್ಘಟನೆ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಆಲಂಗೂರು ಗ್ರಾಮದಲ್ಲಿ ನಡೆದಿದೆ.
ಮೃತ ಮಕ್ಕಳನ್ನು ಸರಸ್ವತಿ (3) ಹಾಗೂ ಹೇಮಾಶ್ರೀ (1) ಎಂದು ಗುರುತಿಸಲಾಗಿದೆ. ಮಕ್ಕಳ ತಾಯಿ ಬುಜ್ಜಮ್ಮ (22) ಈ ಕೃತ್ಯ ಎಸಗಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಆದರೆ ಸಮಯಕ್ಕೆ ಸರಿಯಾಗಿ ಸ್ಥಳೀಯರು ಮಧ್ಯಪ್ರವೇಶಿಸಿ ಆಕೆಯನ್ನು ರಕ್ಷಿಸಿದ್ದಾರೆ.
ಮೂಲತಃ ಆಂಧ್ರಪ್ರದೇಶದ ವಿನಾಯಕಪುರಂ ನಿವಾಸಿಗಳಾದ ಬಾಬು ಮತ್ತು ಬುಜ್ಜಮ್ಮ ದಂಪತಿ ಕಳೆದ ಒಂದು ವರ್ಷದಿಂದ ಆಲಂಗೂರು ಗ್ರಾಮದ ಮಾವಿನ ತೋಟವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ಆದರೆ ಸುಮಾರು 20 ದಿನಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಪತಿ ಬಾಬು ಮೃತಪಟ್ಟಿದ್ದರು. ಪತಿಯ ಸಾವಿನ ಬಳಿಕ ತೀವ್ರ ದುಃಖ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ ಬುಜ್ಜಮ್ಮ ನಿಧಾನವಾಗಿ ಖಿನ್ನತೆಗೆ ಜಾರಿದ್ದಳು ಎಂದು ತಿಳಿದುಬಂದಿದೆ.
ಪತಿಯ ಅಗಲಿಕೆಯ ನೋವಿನಿಂದ ಜೀವನದ ಮೇಲಿನ ಆಸಕ್ತಿ ಕಳೆದುಕೊಂಡಿದ್ದ ಮಹಿಳೆ, ತನ್ನ ಇಬ್ಬರು ಮಕ್ಕಳ ಜೀವ ಕಸಿದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದಾಳೆ ಎನ್ನಲಾಗಿದೆ. ಘಟನೆಯು ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದ್ದು, ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.ಈ ಸಂಬಂಧ ನಂಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.








