ಬೆಂಗಳೂರು: ರಾಜ್ಯದ ಆಸ್ತಿ ಮಾಲೀಕರಿಗೆ ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಗುಡ್ ನ್ಯೂಸ್ ನೀಡಿದ್ದಾರೆ. ಅದೇ ಬೆಂಗಳೂರಿಗೆ ಮಾತ್ರವೇ ಸೀಮಿತವಾಗಿದ್ದಂತ ಬಿ-ಖಾತಾದಿಂದ ಎ-ಖಾತಾ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡುವುದಾಗಿ ಘೋಷಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರದ ಈ ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದರು. ಅದರ ಪ್ರಮುಖ ಮುಖ್ಯಾಂಶಗಳು ಕೆಳಗಿನಂತಿವೆ:
3 ಅಂತಸ್ತಿನ ಮನೆಗಳಿಗೆ ಒಸಿ (OC) ವಿನಾಯ್ತಿ!
ರಾಜಧಾನಿ ಸೇರಿದಂತೆ ರಾಜ್ಯದಾದ್ಯಂತ ಸ್ವಂತ ಮನೆ ಕಟ್ಟಿಕೊಳ್ಳುವ ಜನರಿಗೆ ಸರ್ಕಾರ ಅತಿ ದೊಡ್ಡ ರಿಲೀಫ್ ನೀಡಿದೆ. 3 ಅಂತಸ್ತಿನ ವರೆಗಿನ ಕಟ್ಟಡಗಳಿಗೆ ಹಾಗೂ 2,500 ಚದರ ಅಡಿ ವಿಸ್ತೀರ್ಣದವರೆಗೆ ಮನೆ ನಿರ್ಮಿಸಿ ಅರ್ಜಿ ಹಾಕಿದವರಿಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್ (OC – Occupancy Certificate) ನಿಯಮದಿಂದ ಸಂಪೂರ್ಣ ವಿನಾಯ್ತಿ ನೀಡುವುದಾಗಿ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಘೋಷಿಸಿದ್ದಾರೆ. ಇದರಿಂದಾಗಿ ಸಾವಿರಾರು ಮಧ್ಯಮ ವರ್ಗದ ಮನೆ ಮಾಲೀಕರಿಗೆ ದೊಡ್ಡ ನೆಮ್ಮದಿ ಸಿಕ್ಕಂತಾಗಿದೆ.
ಬಿ-ಖಾತಾದಿಂದ ಎ-ಖಾತಾ: ಇಡೀ ರಾಜ್ಯಕ್ಕೆ ವಿಸ್ತರಣೆ
ಇದುವರೆಗೆ ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿದ್ದ ‘ಬಿ-ಖಾತಾದಿಂದ ಎ-ಖಾತಾ’ (B-Khata to A-Khata) ಪರಿವರ್ತನೆ ಮಾಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಈಗ ಇಡೀ ಕರ್ನಾಟಕ ರಾಜ್ಯಾದ್ಯಂತ ವಿಸ್ತರಿಸಲು ಸರ್ಕಾರ ತೀರ್ಮಾನಿಸಿದೆ. ಈ ನಿರ್ಧಾರದಿಂದಾಗಿ ರಾಜ್ಯದ ಎಲ್ಲಾ ನಗರ ಹಾಗೂ ಪಟ್ಟಣ ಪ್ರದೇಶಗಳ ಆಸ್ತಿ ಮಾಲೀಕರಿಗೆ ತಮ್ಮ ಜಾಗದ ಹಕ್ಕುಗಳನ್ನು ಕಾನೂನುಬದ್ಧಗೊಳಿಸಿಕೊಳ್ಳಲು ಸುಲಭ ಅವಕಾಶ ಸಿಗಲಿದೆ.
‘ಭಾರತ್ ಜೋಡೋ ಯುವಕ ಸಂಘ’ ಸ್ಥಾಪನೆಗೆ ಚಿಂತನೆ: 10 ಲಕ್ಷ ರೂ. ಧನಸಹಾಯ!
ರಾಜ್ಯದ ಯುವಶಕ್ತಿಯನ್ನು ಸಂಘಟಿಸಲು ಮತ್ತು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಲು ‘ಭಾರತ್ ಜೋಡೋ ಯುವಕ ಸಂಘ’ಗಳನ್ನು ರಚಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ.
-
ರಾಜ್ಯಾದ್ಯಂತ ಒಟ್ಟು 10,000 ಯುವಕ ಸಂಘಗಳನ್ನು ರಚಿಸುವ ಗುರಿ ಹೊಂದಲಾಗಿದೆ.
-
ಈ ಯೋಜನೆಗೆ ಆಯ್ಕೆಯಾಗುವ ಪ್ರತಿ ಭಾರತ್ ಜೋಡೋ ಯುವಕ ಸಂಘಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿ ಧನಸಹಾಯ ನೀಡುವ ಆಲೋಚನೆ ಕೂಡ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.
ಆಡಳಿತದ ಮೊದಲ ದಿನವೇ ‘ಭೂ ಗ್ಯಾರಂಟಿ’ ಎಂಬ 6ನೇ ಗ್ಯಾರಂಟಿ ಘೋಷಿಸುವ ಮೂಲಕ ನೂತನ ಸರ್ಕಾರವು ಮನೆ ಮತ್ತು ಆಸ್ತಿ ಮಾಲೀಕರ ಸುದೀರ್ಘ ಕಾಲದ ಸಮಸ್ಯೆಗಳಿಗೆ ನೇರ ಪರಿಹಾರ ಒದಗಿಸಲು ಮುಂದಾಗಿದೆ.






