ಬೆಂಗಳೂರು: ಜಾಗತಿಕವಾಗಿ ಎಬೋಲಾ ವೈರಸ್ ಕಾಯಿಲೆ (Ebola Virus Disease – EVD) ಹರಡುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು (WHO) ಇದನ್ನು ‘ಅಂತರರಾಷ್ಟ್ರೀಯ ಕಳಕಳಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ’ (PHEIC) ಎಂದು ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಇಡೀ ರಾಜ್ಯಾದ್ಯಂತ ತೀವ್ರ ನಿಗಾ ವಹಿಸಲು ಮತ್ತು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಅಧಿಕೃತ ಸುತ್ತೋಲೆ ಹೊರಡಿಸಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಸೂಚನೆಯ ಮೇರೆಗೆ ರಾಜ್ಯದ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು (KPME), ವೈದ್ಯಕೀಯ ಕಾಲೇಜುಗಳು ಮತ್ತು ಸರ್ಕಾರಿ ಆಸ್ಪತ್ರೆಗಳು ಎಬೋಲಾ ರೋಗದ ಲಕ್ಷಣಗಳಿರುವ ರೋಗಿಗಳ ಮೇಲೆ ತೀವ್ರ ನಿಗಾ ಇಡುವಂತೆ ಆದೇಶಿಸಲಾಗಿದೆ.
ಬೆಂಗಳೂರು ಮತ್ತು ಮಂಗಳೂರಿನಲ್ಲಿ ವಿಶೇಷ ಆಸ್ಪತ್ರೆಗಳು ಲಭ್ಯ
ಎಬೋಲಾ ಶಂಕಿತ ರೋಗಿಗಳ ಪತ್ತೆ, ತಪಾಸಣೆ ಮತ್ತು ಚಿಕಿತ್ಸೆಗಾಗಿ ಆರೋಗ್ಯ ಇಲಾಖೆಯು ಬೆಂಗಳೂರು ಮತ್ತು ಮಂಗಳೂರಿನ ಪ್ರಮುಖ ಆಸ್ಪತ್ರೆಗಳನ್ನು ಗುರುತಿಸಿದೆ.
-
ಬೆಂಗಳೂರು ಭಾಗ:
-
ಕ್ವಾರಂಟೈನ್ ಸೌಲಭ್ಯ: ಸಾಂಕ್ರಾಮಿಕ ರೋಗಗಳ ಆಸ್ಪತ್ರೆ (Epidemic Disease Hospital), ಬೆಂಗಳೂರು.
-
ಐಸೊಲೇಶನ್ ಮತ್ತು ಚಿಕಿತ್ಸಾ ಕೇಂದ್ರ: ರಾಜೀವ್ ಗಾಂಧಿ ಎದೆಯೋಗಗಳ ಸಂಸ್ಥೆ (RGICD ಆಸ್ಪತ್ರೆ), ಬೆಂಗಳೂರು.
-
-
ಮಂಗಳೂರು ಭಾಗ:
-
ಕ್ವಾರಂಟೈನ್ ಸೌಲಭ್ಯ: ಶ್ರೀನಿವಾಸ್ ಪೋರ್ಟ್ ಆಸ್ಪತ್ರೆ (NMPA), ಮಂಗಳೂರು.
-
ಐಸೊಲೇಶನ್ ಮತ್ತು ಚಿಕಿತ್ಸಾ ಕೇಂದ್ರ: ವೆನ್ಲಾಕ್ ಆಸ್ಪತ್ರೆ (Wenlock Hospital), ಮಂಗಳೂರು.
-
ಶಂಕಿತ ರೋಗಿಗಳನ್ನು ಸುರಕ್ಷಿತವಾಗಿ ಸಾಗಿಸಲು ಪ್ರತ್ಯೇಕ ಆಂಬ್ಯುಲೆನ್ಸ್ ಸೇವೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇಡಲು ಸೂಚಿಸಲಾಗಿದೆ.
ತಕ್ಷಣದ ವರದಿ ಮತ್ತು ನಿಗಾಕ್ಕೆ ಕಟ್ಟುನಿಟ್ಟಿನ ಆದೇಶ
-
IHIP ಪೋರ್ಟಲ್ ಬಳಕೆ: ಎಲ್ಲಾ ಆರೋಗ್ಯ ಕೇಂದ್ರಗಳು ತಮಗೆ ಕಂಡುಬರುವ ಯಾವುದೇ ಶಂಕಿತ ಅಥವಾ ಸಂಭವನೀಯ ಎಬೋಲಾ ಪ್ರಕರಣಗಳನ್ನು ತಕ್ಷಣವೇ ‘ಇಂಟಿಗ್ರೇಟೆಡ್ ಹೆಲ್ತ್ ಇನ್ಫಾರ್ಮೇಶನ್ ಪ್ಲಾಟ್‌ಫಾರ್ಮ್’ (IHIP) ಪೋರ್ಟಲ್ ಮೂಲಕ ಕಡ್ಡಾಯವಾಗಿ ವರದಿ ಮಾಡಬೇಕು.
-
ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಿಗೆ ಮಾಹಿತಿ: ಶಂಕಿತ ಪ್ರಕರಣ ಪತ್ತೆಯಾದ ತಕ್ಷಣ ಯಾವುದೇ ವಿಳಂಬವಿಲ್ಲದೆ ಆಯಾ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳಿಗೆ (DSO) ಮಾಹಿತಿ ನೀಡಬೇಕು.
-
ರಕ್ತದ ಮಾದರಿಗಳ ತಪಾಸಣೆ: ಶಂಕಿತರ ರಕ್ತದ ಮಾದರಿಗಳನ್ನು ಜಿಲ್ಲಾ ಸರ್ವೇಕ್ಷಣಾ ಘಟಕದ (DSU) ಮೂಲಕ ಬೆಂಗಳೂರಿನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (NIV) ಕೇಂದ್ರಕ್ಕೆ ಕಳುಹಿಸಲಾಗುತ್ತದೆ. ಅಲ್ಲಿಂದ ಅಂತಿಮ ದೃಢೀಕರಣಕ್ಕಾಗಿ ಪುಣೆಯ ಐಸಿಎಂಆರ್-ಎನ್‌ಐವಿ (ICMR-NIV) ಕೇಂದ್ರಕ್ಕೆ ರವಾನಿಸಲಾಗುತ್ತದೆ.
ಎಬೋಲಾ ರೋಗದ ಲಕ್ಷಣಗಳು ಮತ್ತು ಹರಡುವಿಕೆ ಏನು?
-
ಶಂಕಿತ ರೋಗಿ (Suspect Case): ಕಳೆದ 21 ದಿನಗಳಲ್ಲಿ ಎಬೋಲಾ ಪೀಡಿತ ದೇಶಗಳಿಗೆ ಪ್ರವಾಸ ಮಾಡಿದ ಇತಿಹಾಸ ಹೊಂದಿದ್ದು, ತೀವ್ರ ಜ್ವರ, ಅತಿಯಾದ ಸುಸ್ತು, ತಲೆನೋವು, ಮೈಕೈ ನೋವು, ಗಂಟಲು ನೋವು, ವಾಂತಿ, ಭೇದಿ ಕಾಣಿಸಿಕೊಂಡರೆ ಅಥವಾ ಒಸಡುಗಳಿಂದ ರಕ್ತಸ್ರಾವ, ಮೂಗಿನಿಂದ ರಕ್ತ ಸೋರುವುದು, ಕಣ್ಣು ಕೆಂಪಾಗುವುದು ಮತ್ತು ಮಲದಲ್ಲಿ ರಕ್ತ ಬೀಳುವಂತಹ ಲಕ್ಷಣಗಳಿದ್ದರೆ ಅವರನ್ನು ಶಂಕಿತರು ಎಂದು ಪರಿಗಣಿಸಲಾಗುತ್ತದೆ.
-
ಸಂಭವನೀಯ ರೋಗಿ (Probable Case): ಎಬೋಲಾ ದೃಢಪಟ್ಟ ರೋಗಿಯೊಂದಿಗೆ ಕಳೆದ 21 ದಿನಗಳಲ್ಲಿ ನೇರ ಸಂಪರ್ಕ ಹೊಂದಿದ್ದು, ರೋಗದ ಲಕ್ಷಣಗಳನ್ನು ತೋರಿಸುವವರನ್ನು ಈ ಪಟ್ಟಿಗೆ ಸೇರಿಸಲಾಗುತ್ತದೆ.
-
ಸಂಪರ್ಕಿತರು (Contact): ರೋಗದ ಲಕ್ಷಣಗಳಿಲ್ಲದಿದ್ದರೂ, ಕಳೆದ ಮೂರು ವಾರಗಳಲ್ಲಿ ಎಬೋಲಾ ರೋಗಿಯೊಂದಿಗೆ ಒಂದೇ ಕೋಣೆ ಅಥವಾ ಹಾಸಿಗೆ ಹಂಚಿಕೊಂಡವರು, ರೋಗಿಯ ಆರೈಕೆ ಮಾಡಿದವರು ಅಥವಾ ಅವರ ದೇಹದ ದ್ರವಗಳನ್ನು ಸ್ಪರ್ಶಿಸಿದವರನ್ನು ತೀವ್ರ ನಿಗಾದಲ್ಲಿ ಇಡಲಾಗುತ್ತದೆ.
ವಿಮಾನ ನಿಲ್ದಾಣ ಹಾಗೂ ಬಂದರುಗಳಲ್ಲಿ ತಪಾಸಣೆ
ಕಾಂಗೋ (DRC) ಮತ್ತು ಉಗಾಂಡಾ ಸೇರಿದಂತೆ ಆಫ್ರಿಕನ್ ದೇಶಗಳಿಂದ ಬರುವ ಪ್ರಯಾಣಿಕರ ಮೇಲೆ ವಿಶೇಷ ನಿಗಾ ಇಡಲು ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣದ ಆರೋಗ್ಯ ಪ್ರಾಧಿಕಾರ (Airport Health Authority) ಹಾಗೂ ಮಂಗಳೂರು ಬಂದರಿನ ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಾರ್ವಜನಿಕರಲ್ಲಿ ಅನಗತ್ಯ ಭೀತಿ ಅಥವಾ ವದಂತಿಗಳು ಹರಡದಂತೆ ಜಾಗೃತಿ ಮೂಡಿಸಲು ಮತ್ತು ವೈದ್ಯಕೀಯ ಸಿಬ್ಬಂದಿಗೆ ವೈಯಕ್ತಿಕ ರಕ್ಷಣಾ ಸಾಧನಗಳನ್ನು (PPE) ಒದಗಿಸಲು ಇಲಾಖೆ ಕ್ರಮ ಕೈಗೊಂಡಿದೆ.
BIG BREAKING: ಅಜ್ಜಯ್ಯನ ಹೆಸರಿನಲ್ಲಿ ಕರ್ನಾಟಕದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ







