ಮೃತ ಪೋಷಕರ ಕಲ್ಯಾಣ ಯೋಜನೆಗಳ ಫಲಾನುಭವಿಗಳ ಪಟ್ಟಿಯಿಂದ ವಿವಾಹಿತ ಪುತ್ರಿಯನ್ನು ಹೊರಗಿಡಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಮದುವೆಯ ನಂತರ ಮಗಳು ತನ್ನ ಪೋಷಕರ ಕುಟುಂಬದ ಸದಸ್ಯಳಾಗಿ ಉಳಿಯುವುದಿಲ್ಲ ಎಂಬ ಕಲ್ಪನೆಯು “ಸಂವಿಧಾನಬದ್ಧವಾಗಿ ಅಸ್ವೀಕಾರಾರ್ಹ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಅರಾಧೆ ಅವರಿದ್ದ ಪೀಠವು ಅಮೇಥಿಯ ಪ್ರಕರಣವೊಂದನ್ನು ವಿಚಾರಣೆ ನಡೆಸುವಾಗ ಈ ಅವಲೋಕನಗಳನ್ನು ಮಾಡಿದೆ. 2019ರ ಉತ್ತರ ಪ್ರದೇಶದ ನಿಯಮವೊಂದರ ಪ್ರಕಾರ, ವಿವಾಹಿತ ಪುತ್ರಿಯನ್ನು ‘ಕುಟುಂಬ’ದ ವ್ಯಾಖ್ಯಾನದಿಂದ ಹೊರಗಿಡಲಾಗಿತ್ತು. ಈ ನಿಯಮವನ್ನು ಉಲ್ಲೇಖಿಸಿ, ಮೃತ ತಾಯಿಯ ನ್ಯಾಯಬೆಲೆ ಅಂಗಡಿಯನ್ನು (Fair Price Shop) ನಡೆಸಲು ಮಗಳಿಗೆ ನಿರಾಕರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಸಹಾನುಭೂತಿಯ ಆಧಾರದ ಮೇಲೆ ನೇಮಕಾತಿಗಾಗಿ ‘ಕುಟುಂಬ’ದ ವ್ಯಾಖ್ಯಾನವನ್ನು ಎತ್ತಿಹಿಡಿದಿದ್ದ ಅಲಹಾಬಾದ್ ಹೈಕೋರ್ಟ್ನ ಮಾರ್ಚ್ 2025ರ ಆದೇಶವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ.
”ವಿವಾಹವಾದ ನಂತರ ಮಗಳು ತನ್ನ ಪೋಷಕರ ಕುಟುಂಬದ ಸದಸ್ಯಳಾಗಿರುವುದಿಲ್ಲ ಅಥವಾ ಅವರ ಮೇಲೆ ಅವಲಂಬಿತಳಾಗಿರುವುದಿಲ್ಲ ಎಂಬ ಊಹೆಯ ಮೇಲೆ ಈ ನಿಯಮ ರೂಪಿಸಲಾಗಿದೆ. ಇಂತಹ ಊಹೆಯು ಸಂವಿಧಾನಬದ್ಧವಾಗಿ ಅಸ್ವೀಕಾರಾರ್ಹ… ಇದು ಸಂವಿಧಾನದ ಸಮಾನತೆಯ ಖಾತರಿಗೆ ವಿರುದ್ಧವಾಗಿದೆ ಮತ್ತು ಸಂವಿಧಾನವು ನಿರ್ಮೂಲನೆ ಮಾಡಲು ಬಯಸುವ ಐತಿಹಾಸಿಕ ಲಿಂಗ ಅಸಮಾನತೆಯ ಕಲ್ಪನೆಗಳನ್ನು ಶಾಶ್ವತಗೊಳಿಸುತ್ತದೆ” ಎಂದು ಪೀಠವು ಗಮನಿಸಿದೆ.
ಅರ್ಜಿದಾರರಾದ ಕುಲ್ಸುಮ್ ನಿಶಾ ಅವರು ವಿವಾಹಿತರಾಗಿದ್ದರೂ, ತಮ್ಮ ತಾಯಿ ಮತ್ತು ನಾಲ್ವರು ಸಹೋದರಿಯರೊಂದಿಗೆ ವಾಸಿಸುತ್ತಿದ್ದು, ಅವರಿಗೆ ಆಧಾರವಾಗಿದ್ದರು ಎಂದು ನ್ಯಾಯಾಲಯವು ಗಮನಿಸಿದೆ. ಹೀಗಾಗಿ, ನಾಲ್ಕು ವಾರಗಳ ಒಳಗಾಗಿ ನ್ಯಾಯಬೆಲೆ ಅಂಗಡಿಯನ್ನು ಅವರ ಹೆಸರಿಗೆ ಮಂಜೂರು ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಮಾರ್ಚ್ 2024ರಲ್ಲಿ ತಾಯಿಯ ನಿಧನದ ನಂತರ ನಿಶಾ ಅಂಗಡಿಯನ್ನು ನಡೆಸಲು ಅರ್ಜಿ ಸಲ್ಲಿಸಿದ್ದರು. ಆದರೆ ಆಗಸ್ಟ್ 2019ರ ಉತ್ತರ ಪ್ರದೇಶ ಅಗತ್ಯ ಸರಕುಗಳ (ಮಾರಾಟ ಮತ್ತು ವಿತರಣಾ ನಿಯಂತ್ರಣ) ಆದೇಶದಡಿ ಹೊರಡಿಸಲಾದ ನಿಯಮವು ಅವರಿಗೆ ಅಡ್ಡಿಯಾಗಿತ್ತು.
ನ್ಯಾಯಮೂರ್ತಿ ಅರಾಧೆ ಅವರು ಬರೆದ ತೀರ್ಪಿನಲ್ಲಿ, “ಮಗನು ತನ್ನ ವೈವಾಹಿಕ ಸ್ಥಿತಿಯ ಹೊರತಾಗಿಯೂ ಕುಟುಂಬದ ಭಾಗವಾಗಿ ಮುಂದುವರಿಯುತ್ತಾನೆ, ಆದರೆ ಮಗಳನ್ನು ಕೇವಲ ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ ಹೊರಗಿಡಲಾಗುತ್ತದೆ. ಈ ತಾರತಮ್ಯವು, ಮದುವೆಯಾದ ನಂತರ ಮಗಳು ಬೇರೊಂದು ಕುಟುಂಬದ ಸದಸ್ಯಳಾಗುತ್ತಾಳೆ ಮತ್ತು ತನ್ನ ಹುಟ್ಟಿದ ಮನೆಯೊಂದಿಗಿನ ಎಲ್ಲಾ ಸಂಬಂಧಗಳನ್ನು ಕಳೆದುಕೊಳ್ಳುತ್ತಾಳೆ ಎಂಬ ಲಿಂಗ ಆಧಾರಿತ ಸ್ಟೀರಿಯೊಟೈಪ್ (ಮೂಢನಂಬಿಕೆ) ಮೇಲೆ ನಿರ್ಮಾಣವಾಗಿದೆ” ಎಂದು ಹೇಳಲಾಗಿದೆ.
ಮದುವೆಯ ನಂತರವೂ ಅನೇಕ ವಿವಾಹಿತ ಪುತ್ರಿಯರು ತಮ್ಮ ಪೋಷಕರೊಂದಿಗೆ ವಾಸಿಸುತ್ತಿದ್ದಾರೆ, ಅವರನ್ನು ಬೆಂಬಲಿಸುತ್ತಿದ್ದಾರೆ ಅಥವಾ ಅವರ ಮೇಲೆ ಅವಲಂಬಿತರಾಗಿದ್ದಾರೆ ಎಂಬುದು ಸಮಕಾಲೀನ ಸಾಮಾಜಿಕ ವಾಸ್ತವವಾಗಿದೆ ಎಂದು ನ್ಯಾಯಾಲಯ ಹೇಳಿದೆ. “ಅವಲಂಬನೆಯು ಸತ್ಯದ ಪ್ರಶ್ನೆಯಾಗಿದ್ದು, ಅದನ್ನು ಕೇವಲ ವೈವಾಹಿಕ ಸ್ಥಿತಿಯನ್ನು ನೋಡಿ ನಿರ್ಧರಿಸಲು ಸಾಧ್ಯವಿಲ್ಲ,” ಎಂದು ಪೀಠವು ಅಭಿಪ್ರಾಯಪಟ್ಟಿದ್ದು, ಇನ್ಮುಂದೆ ವಿವಾಹಿತ ಪುತ್ರಿಯರನ್ನು ಕುಟುಂಬದ ವ್ಯಾಖ್ಯಾನದಲ್ಲಿ ಸೇರಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಈ ನಿಯಮವು ಎಲ್ಲಾ ಹೆಣ್ಣುಮಕ್ಕಳನ್ನು ಹೊರಗಿಟ್ಟಿರಲಿಲ್ಲ; “ಅವಿವಾಹಿತ, ಕಾನೂನುಬದ್ಧವಾಗಿ ವಿಚ್ಛೇದನ ಪಡೆದ ಅಥವಾ ವಿಧವೆಯಾದ ಪುತ್ರಿಯರಿಗೆ” ನ್ಯಾಯಬೆಲೆ ಅಂಗಡಿಯನ್ನು ಮುಂದುವರಿಸಲು ಅವಕಾಶವಿತ್ತು ಎಂಬುದನ್ನು ನ್ಯಾಯಾಲಯ ಗಮನಿಸಿದೆ.
ಇದಕ್ಕೂ ಮುನ್ನ, ನಿಶಾ ಅವರು ಅಲಹಾಬಾದ್ ಹೈಕೋರ್ಟ್ನ ಲಕ್ನೋ ಪೀಠವನ್ನು ಸಂಪರ್ಕಿಸಿದ್ದರು. ಆದರೆ ಹೈಕೋರ್ಟ್ 2016ರ ನಿಯಮಗಳನ್ನು ಉಲ್ಲೇಖಿಸಿ ಅವರ ಮನವಿಯನ್ನು ಮಾರ್ಚ್ 5, 2025ರಂದು ತಿರಸ್ಕರಿಸಿತ್ತು. ಈ ವಿಷಯದಲ್ಲಿ ಇತರ ಹೈಕೋರ್ಟ್ಗಳಲ್ಲಿ ಭಿನ್ನಾಭಿಪ್ರಾಯಗಳಿದ್ದ ಕಾರಣ, ಕಾನೂನಿನ ಪ್ರಶ್ನೆಯನ್ನು ನಿರ್ಧರಿಸಲು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಲು ಹೈಕೋರ್ಟ್ ಅನುಮತಿ ನೀಡಿತ್ತು.
ನ್ಯಾಯಮೂರ್ತಿ ಅರಾಧೆ ಅವರು, “ಅಲಹಾಬಾದ್ ಹೈಕೋರ್ಟ್ನ ವಿಮ್ಲಾ ಶ್ರೀವಾಸ್ತವ ಪ್ರಕರಣದಲ್ಲಿ ವ್ಯಕ್ತವಾದ ಅಭಿಪ್ರಾಯದೊಂದಿಗೆ ನಾವು ಸಹಮತ ಹೊಂದಿದ್ದೇವೆ. ಬಾಂಬೆ, ಕರ್ನಾಟಕ ಮತ್ತು ಕಲ್ಕತ್ತಾ ಹೈಕೋರ್ಟ್ಗಳು ಕೂಡ, ಒಬ್ಬ ಅರ್ಹ ಮಗಳಿಗೆ ಕಲ್ಯಾಣ ಯೋಜನೆಯ ಲಾಭವನ್ನು ನಿರಾಕರಿಸಲು ವೈವಾಹಿಕ ಸ್ಥಿತಿಯು ಮಾನ್ಯವಾದ ಕಾರಣವಾಗಲು ಸಾಧ್ಯವಿಲ್ಲ ಎಂಬ ತತ್ವವನ್ನು ಎತ್ತಿಹಿಡಿದಿವೆ,” ಎಂದರು.
ಕುಟುಂಬದ ಆಧಾರದಲ್ಲಿ ನ್ಯಾಯಬೆಲೆ ಅಂಗಡಿ ಮಂಜೂರು ಮಾಡುವ ಈ ಯೋಜನೆಯು, ಮೃತ ವ್ಯಕ್ತಿಯ ಕುಟುಂಬವು ಅನುಭವಿಸುವ ತಕ್ಷಣದ ಸಂಕಷ್ಟವನ್ನು ಕಡಿಮೆ ಮಾಡಲು ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆಯು ನಿರಂತರವಾಗಿ ಕಾರ್ಯನಿರ್ವಹಿಸುವುದನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಿದೆ ಎಂದು ನ್ಯಾಯಾಲಯ ಹೇಳಿದೆ. “ಅವಲಂಬನೆ, ಆರ್ಥಿಕ ಅಗತ್ಯ, ನಿವಾಸ ಮತ್ತು ಅಂಗಡಿ ನಿರ್ವಹಣೆಯ ಜವಾಬ್ದಾರಿಯನ್ನು ನಿರ್ವಹಿಸುವ ಸಾಮರ್ಥ್ಯಗಳು ಇಲ್ಲಿ ಮುಖ್ಯವಾದ ವಿಚಾರಗಳಾಗಿವೆ. ವೈವಾಹಿಕ ಸ್ಥಿತಿಗೂ ಈ ಅಂಶಗಳಿಗೂ ಯಾವುದೇ ತಾರ್ಕಿಕ ಸಂಬಂಧವಿಲ್ಲ,” ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ.








