ಬೆಂಗಳೂರು: ವೈದ್ಯಕೀಯ ಗರ್ಭಪಾತದ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಅತ್ಯಂತ ಐತಿಹಾಸಿಕ ಮತ್ತು ಮಹತ್ವದ ತೀರ್ಪೊಂದನ್ನು ನೀಡಿದೆ. ಗರ್ಭಪಾತ ಮಾಡಿಸಿಕೊಳ್ಳುವುದು ಮಹಿಳೆಯ ದೈಹಿಕ ಸ್ವಾಯತ್ತತೆಗೆ ಸಂಬಂಧಿಸಿದ ಹಕ್ಕು ಎಂದು ಉಚ್ಚ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಷ್ಟೇ ಅಲ್ಲದೆ, ಗಂಭೀರ ನರಮಂಡಲದ ಸಮಸ್ಯೆಯಿಂದ ಬಳಲುತ್ತಿರುವ 32 ವಾರಗಳ ಭ್ರೂಣವನ್ನು ಕಾನೂನಾತ್ಮಕವಾಗಿ ತೆಗೆದುಹಾಕಲು ಹಸಿರು ನಿಶಾನೆ ತೋರಿಸಿದೆ.
ಸಾಮಾನ್ಯವಾಗಿ ಭಾರತೀಯ ಕಾನೂನಿನ ಪ್ರಕಾರ 24 ವಾರಗಳವರೆಗೆ ಮಾತ್ರ ವೈದ್ಯಕೀಯ ಗರ್ಭಪಾತಕ್ಕೆ ಅವಕಾಶವಿರುತ್ತದೆ. ಆದರೆ, ಈ ವಿಶೇಷ ಪ್ರಕರಣದಲ್ಲಿ ಭ್ರೂಣಕ್ಕೆ ಈಗಾಗಲೇ 32 ವಾರಗಳಾಗಿದ್ದರೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠವು ಗರ್ಭಪಾತಕ್ಕೆ ವಿಶೇಷ ಅನುಮತಿ ನೀಡಿದೆ.
ಹೆತ್ತವರ ನೋವು ಮತ್ತು ಆರ್ಥಿಕ ಸಂಕಷ್ಟ: ಒಂದು ವೇಳೆ ಇಂತಹ ಗಂಭೀರ ದೋಷವಿರುವ ಮಗು ಜನಿಸಿದರೆ, ಆ ಮಗು ಜೀವನಪೂರ್ತಿ ನರಳಬೇಕಾಗುತ್ತದೆ. ಅದನ್ನು ನೋಡುವ ಹೆತ್ತವರ ಮಾನಸಿಕ ಸ್ಥಿತಿ, ಮಗುವಿನ ಜೀವಮಾನದ ಕಷ್ಟ ಹಾಗೂ ಅದಕ್ಕಾಗುವ ಆರ್ಥಿಕ ಹೊರೆಯನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ತಾಯಿ ಮತ್ತು ಭ್ರೂಣದ ಆರೋಗ್ಯ ತಪಾಸಣೆ ನಡೆಸಲು ಸರ್ಕಾರ ರಚಿಸಿದ್ದ ವಿಶೇಷ ವೈದ್ಯಕೀಯ ಮಂಡಳಿಯು, “ಮಗು ಜನಿಸಿದರೂ ಗಂಭೀರ ನರರೋಗದ ವೈಕಲ್ಯದಿಂದ ಬಳಲುವ ಸಾಧ್ಯತೆ ಹೆಚ್ಚಿದೆ ಹಾಗೂ ಜೀವನಪೂರ್ತಿ ಇತರರ ಆಸರೆಯಲ್ಲೇ ಬದುಕಬೇಕಾಗುತ್ತದೆ” ಎಂದು ವರದಿ ನೀಡಿತ್ತು.
ಪ್ರಕರಣದ ಹಿನ್ನೆಲೆ ಏನು?
ಸಂತ್ರಸ್ತ ಮಹಿಳೆಯು ಮೇ ತಿಂಗಳಲ್ಲಿ ಸ್ಕ್ಯಾನಿಂಗ್ ಮಾಡಿಸಿದಾಗ ಭ್ರೂಣದಲ್ಲಿ ತೀವ್ರ ಸ್ವರೂಪದ ನ್ಯೂರೋಲಾಜಿಕಲ್ (ನರಮಂಡಲದ) ದೋಷವಿರುವುದು ಪತ್ತೆಯಾಗಿತ್ತು. ಇದರಿಂದ ಕಂಗಾಲಾದ ಕುಟುಂಬಸ್ಥರು ಕಾನೂನುಬದ್ಧ ಗರ್ಭಪಾತಕ್ಕೆ ಅನುಮತಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ ಸಂತ್ರಸ್ತೆಯ ಪತಿ ಕೂಡ ನ್ಯಾಯಾಲಯಕ್ಕೆ ಹಾಜರಾಗಿ, ಇಬ್ಬರು ತಜ್ಞ ವೈದ್ಯರ ಸಲಹೆ ಹಾಗೂ ವೈದ್ಯಕೀಯ ವರದಿಗಳ ಆಧಾರದ ಮೇಲೆಯೇ ತಾವು ಈ ಕಠಿಣ ನಿರ್ಧಾರಕ್ಕೆ ಬಂದಿರುವುದಾಗಿ ಕೋರ್ಟ್‌ಗೆ ತಿಳಿಸಿದ್ದರು. ಅಂತಿಮವಾಗಿ ವೈದ್ಯಕೀಯ ವರದಿ, ದಂಪತಿಯ ಒಪ್ಪಿಗೆ ಮತ್ತು ಮಹಿಳೆಯ ಹಕ್ಕನ್ನು ಗೌರವಿಸಿ ಹೈಕೋರ್ಟ್ ಈ ಮಾನವೀಯ ಆದೇಶ ಹೊರಡಿಸಿದೆ.








