ಬೆಂಗಳೂರು: ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಜೂನ್ 3ರಂದು ರಾಜಧಾನಿ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಗರದ ಪ್ರಮುಖ ಸ್ಥಳಗಳ ಸುತ್ತಮುತ್ತ ‘ತಾತ್ಕಾಲಿಕ ನೋ ಫ್ಲೈ ಝೋನ್’ (Temporary No Fly Zone) ಘೋಷಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಭದ್ರತಾ ಹಿತದೃಷ್ಟಿಯಿಂದ ಬೆಂಗಳೂರಿನ ಕನ್ನಿಂಗ್‌ಹ್ಯಾಮ್ ರಸ್ತೆಯಲ್ಲಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಕಚೇರಿ ಹಾಗೂ ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಹೋಟೆಲ್ ಶಾಂಗ್ರಿ-ಲಾ ಸುತ್ತಲಿನ 1 ಕಿಲೋಮೀಟರ್ ವ್ಯಾಪ್ತಿಯನ್ನು ನಿಷೇಧಿತ ವಲಯ ಎಂದು ಘೋಷಿಸಲಾಗಿದೆ.
ಡ್ರೋನ್, ಗ್ಲೈಡರ್ ಹಾರಾಟಕ್ಕೆ ಕಟ್ಟುನಿಟ್ಟಿನ ನಿಷೇಧ!
ಪೊಲೀಸ್ ಆಯುಕ್ತರು ಮತ್ತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಆಗಿರುವ ಸೀಮಂತ್ ಕುಮಾರ್ ಸಿಂಗ್ (I.P.S) ಅವರು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) ಸೆಕ್ಷನ್ 163ರ ಅಡಿಯಲ್ಲಿ ಈ ಆದೇಶವನ್ನು ಹೊರಡಿಸಿದ್ದಾರೆ. ಇದರ ಅನ್ವಯ ನಿಗದಿತ ದಿನ ಹಾಗೂ ಸಮಯದ ಅವಧಿಯಲ್ಲಿ ಯಾವುದೇ ರೀತಿಯ ಡ್ರೋನ್‌ಗಳು, ಯುಎವಿಗಳು (UAVs), ಗ್ಲೈಡರ್ ವಿಮಾನಗಳು, ಸಣ್ಣ ವಿಮಾನಗಳು ಹಾಗೂ ಇತರೆ ಅನಿಗದಿತ (Non-scheduled) ವಿಮಾನಗಳ ಹಾರಾಟವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಯಾವಾವಾಗ ನಿಷೇಧ ಇರಲಿದೆ? (ದಿನಾಂಕ ಮತ್ತು ಸಮಯ):
-
ಕೆಪಿಸಿಸಿ ಕಚೇರಿ (KPCC Office) ಪರಿಸರ: ಜೂನ್ 3, 2026 ರಂದು ಬೆಳಗ್ಗೆ 06:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ.
-
ಹೋಟೆಲ್ ಶಾಂಗ್ರಿ-ಲಾ (Hotel Shangri-La) ಪರಿಸರ: ಜೂನ್ 3, 2026 ರ ಬೆಳಗ್ಗೆ 06:00 ಗಂಟೆಯಿಂದ ಜೂನ್ 4, 2026 ರ ಸಂಜೆ 06:00 ಗಂಟೆಯವರೆಗೆ ಈ ನಿಯಮ ಜಾರಿಯಲ್ಲಿರಲಿದೆ.
ಭದ್ರತೆಗೆ ಸರ್ವ ಸನ್ನದ್ಧ
ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಉನ್ನತ ಮಟ್ಟದ ವಿವಿಐಪಿಗಳು (VVIPs) ಹಾಗೂ ಇತರ ನಿಯೋಗಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಅವರ ವರದಿಯನ್ನಾಧರಿಸಿ ಈ ಆದೇಶ ಹೊರಡಿಸಲಾಗಿದ್ದು, ಜಂಟಿ ಪೊಲೀಸ್ ಆಯುಕ್ತರು, ಸಂಚಾರ ವಿಭಾಗ ಹಾಗೂ ವಿವಿಐಪಿ ಭದ್ರತಾ ವಿಭಾಗದ ಅಧಿಕಾರಿಗಳಿಗೆ ಸೂಕ್ತ ನಿಗಾ ವಹಿಸಲು ಸೂಚಿಸಲಾಗಿದೆ.
ಅಲ್ಲದೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ರಾಜ್ಯ ಪೊಲೀಸ್ ಮಹಾನಿರ್ದೇಶಕರು (DG&IGP), ವಾಯುಪಡೆ (IAF) ಮತ್ತು ಡಿಜಿಸಿಎ (DGCA) ಅಧಿಕಾರಿಗಳಿಗೂ ಈ ಆದೇಶದ ಪ್ರತಿಯನ್ನು ರವಾನಿಸಿ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಾಗಿದೆ.








