ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನ ಗಿಳಾಲಗುಂಡಿ ಕ್ರಾಸ್ ಬಳಿ ಇಂದು ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದೆ. ಚಲಿಸುತ್ತಿದ್ದ ಖಾಸಗಿ ಬಸ್ ಶಿವಮೊಗ್ಗದಿಂದ ಸಾಗರದ ಕಡೆಗೆ ತೆರಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಈ ದುರ್ಘಟನೆಯಲ್ಲಿ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಖಾಸಗಿ ಬಸ್‌ನ ಮುಂಭಾಗ ನಜ್ಜುಗುಜ್ಜಾಗಿದೆ. ರಸ್ತೆ ಪಕ್ಕದ ತಡೆಗೋಡೆಗೆ ಡಿಕ್ಕಿ ಹೊಡೆಯುತ್ತಿದ್ದಂತೆ ಬಸ್‌ನಲ್ಲಿದ್ದ ಪ್ರಯಾಣಿಕರು ಆತಂಕದಿಂದ ಕಿರುಚಾಡಿದ್ದಾರೆ. ಅದೃಷ್ಟವಶಾತ್, ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದ್ದು, ಪ್ರಯಾಣಿಕರು ದೊಡ್ಡ ಗಂಡಾಂತರದಿಂದ ಪಾರಾಗಿದ್ದಾರೆ.
ಖಾಸಗಿ ಬಸ್ ಶಿವಮೊಗ್ಗದಿಂದ ಸಾಗರದ ಕಡೆಗೆ ತೆರೆಳುತ್ತಿತ್ತು ಎನ್ನಲಾಗಿದೆ. ಅಪಘಾತ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಆನಂದಪುರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲು ನೆರವಾಗಿದ್ದು, ಘಟನಾ ಸ್ಥಳದ ಪರಿಶೀಲನೆ ನಡೆಸುತ್ತಿದ್ದಾರೆ. ಜೊತೆಗೆ ರಸ್ತೆಯಲ್ಲಿ ಉಂಟಾಗಿದ್ದ ಸಂಚಾರ ದಟ್ಟಣೆಯನ್ನು ಸುಗಮಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಅಪಘಾತಕ್ಕೆ ಚಾಲಕನ ಅತಿವೇಗ ಕಾರಣವೇ ಅಥವಾ ವಾಹನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತೇ ಎಂಬ ಅಪಘಾತದ ನಿಖರ ಕಾರಣದ ಬಗ್ಗೆ ಆನಂದಪುರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರಿದಿದ್ದು, ಮತ್ತಷ್ಟು ಮಾಹಿತಿ ಲಭ್ಯವಾಗಬೇಕಿದೆ.








