ಗದಗ: ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ವೃದ್ಧ ದಂಪತಿಯ ಮೇಲೆ ದುಷ್ಕರ್ಮಿಗಳು ಕಬ್ಬಿಣದ ರಾಡ್ ಹಾಗೂ ದೊಣ್ಣೆಗಳಿಂದ ಅಮಾನುಷವಾಗಿ ಹಲ್ಲೆ ನಡೆಸಿರುವ ಘೋರ ಘಟನೆ ಗದಗ ತಾಲೂಕಿನ ಬೆಳಧಡಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿಗಳಾದ ಕಪ್ಪತಪ್ಪ ಹೊಸಳ್ಳಿ ಹಾಗೂ ಅವರ ಪತ್ನಿ ರೇಣವ್ವ ಹೊಸಳ್ಳಿ ಹಲ್ಲೆಗೊಳಗಾದ ದುರ್ದೈವಿ ವೃದ್ಧ ದಂಪತಿಯಾಗಿದ್ದಾರೆ.
ಮೊಬೈಲ್‌ನಲ್ಲಿ ಸೆರೆಯಾಯ್ತು ದೃಶ್ಯ
ವೃದ್ಧ ದಂಪತಿಯನ್ನು ಅಟ್ಟಾಡಿಸಿ ಅತ್ಯಂತ ಕ್ರೂರವಾಗಿ ಹೊಡೆಯುತ್ತಿರುವ ದೃಶ್ಯಾವಳಿಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತುತ್ತು ಅನ್ನ ನೀಡುವ ಭೂಮಿಗಾಗಿ, ವಯಸ್ಸಾದವರೆಂಬ ಕರುಣೆಯೂ ಇಲ್ಲದೆ, ಮಹಿಳೆ ಎಂದೂ ನೋಡದೆ ದುಷ್ಕರ್ಮಿಗಳು ಅಮಾನವೀಯವಾಗಿ ಥಳಿಸಿದ್ದಾರೆ.
ಈ ಭೀಕರ ಹಲ್ಲೆ ಘಟನೆಯು ಮೇ 28ರಂದೇ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಮೀನಿನ ಜಗಳವೇ ಈ ಘಟನೆಗೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಸದ್ಯ ಈ ಸಂಬಂಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಲ್ವರ ವಿರುದ್ಧ ಕೇಸ್
ವೃದ್ಧ ದಂಪತಿಯ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಮಹೇಶ್ ಹೊಂಬಳ, ರಮೇಶ್ ಹೊಂಬಳ ಸೇರಿದಂತೆ ಒಟ್ಟು ನಾಲ್ಕು ಜನರ ವಿರುದ್ಧ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.








