ಭಾರತದ ನಗರಗಳಲ್ಲಿ ಉತ್ಪತ್ತಿಯಾಗುವ ಬೃಹತ್ ಪ್ರಮಾಣದ ತ್ಯಾಜ್ಯವು ಶೀಘ್ರದಲ್ಲೇ 51 ಬಿಲಿಯನ್ ಡಾಲರ್ ಮೌಲ್ಯದ ಆರ್ಥಿಕ ಅವಕಾಶವಾಗಿ ಬದಲಾಗಲಿದೆ ಎಂದು ಹವಾಮಾನ, ಇಂಧನ ಮತ್ತು ಸುಸ್ಥಿರ ಅಭಿವೃದ್ಧಿ ಕುರಿತು ಕಾರ್ಯನಿರ್ವಹಿಸುವ ದೆಹಲಿ ಮೂಲದ ಚಿಂತಕರ ಚಾವಡಿ ‘ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್ಮೆಂಟ್ ಅಂಡ್ ವಾಟರ್’ (CEEW) ತನ್ನ ಹೊಸ ವರದಿಯಲ್ಲಿ ತಿಳಿಸಿದೆ.
ಅಡುಗೆ ಮನೆಯ ಕಸ, ಆಹಾರದ ಉಳಿಕೆಗಳು, ತರಕಾರಿ ತ್ಯಾಜ್ಯ ಮತ್ತು ತೋಟಗಾರಿಕೆ ತ್ಯಾಜ್ಯಗಳಂತಹ ನಗರದ ಸಾವಯವ ತ್ಯಾಜ್ಯವನ್ನು ಉತ್ತಮವಾಗಿ ನಿರ್ವಹಿಸಿದರೆ, ಮುಂದಿನ ಎರಡು ದಶಕಗಳಲ್ಲಿ ಸುಮಾರು 26 ಲಕ್ಷ ನೇರ ಉದ್ಯೋಗಗಳನ್ನು ಸೃಷ್ಟಿಸಬಹುದು, 24 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸಬಹುದು ಮತ್ತು ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಅಧ್ಯಯನ ಹೇಳಿದೆ.
CEEW ಭಾರತದ ಪ್ರಮುಖ ನೀತಿ ಸಂಶೋಧನಾ ಸಂಸ್ಥೆಗಳಲ್ಲಿ ಒಂದಾಗಿದ್ದು, ಹವಾಮಾನ ಬದಲಾವಣೆ, ಶುದ್ಧ ಇಂಧನ, ಸುಸ್ಥಿರತೆ ಮತ್ತು ಸಂಪನ್ಮೂಲ ನಿರ್ವಹಣೆಯಂತಹ ವಿಷಯಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಇದು ಪರಿಸರ ಆಡಳಿತ ಮತ್ತು ಹಸಿರು ಆರ್ಥಿಕ ಬೆಳವಣಿಗೆಯ ತಂತ್ರಗಳ ಕುರಿತು ಸರ್ಕಾರಗಳಿಗೆ ಸಲಹೆ ನೀಡುತ್ತದೆ.
ಪ್ರಸ್ತುತ ಭಾರತದಲ್ಲಿ ಪ್ರತಿದಿನ ಸುಮಾರು 1.71 ಲಕ್ಷ ಟನ್ ಪುರಸಭೆಯ ಘನತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದರಲ್ಲಿ ಅರ್ಧದಷ್ಟು ಸಾವಯವ ತ್ಯಾಜ್ಯವೇ ಇದೆ. ಆದರೆ, ಕೇವಲ 61% ತ್ಯಾಜ್ಯ ಮಾತ್ರ ಸಂಸ್ಕರಣೆಯಾಗುತ್ತಿದೆ. ಹೆಚ್ಚಿನ ಕಸವು ಭೂಭರ್ತಿ ಪ್ರದೇಶಗಳಲ್ಲಿ (Landfills), ಚರಂಡಿಗಳಲ್ಲಿ ಅಥವಾ ಬಯಲಲ್ಲಿ ಸುಡಲ್ಪಡುತ್ತಿದೆ. ಬಯಲಲ್ಲಿ ಕಸ ಸುಡುವುದರಿಂದ ಭಾರತೀಯ ನಗರಗಳಲ್ಲಿ PM2.5 ಮಾಲಿನ್ಯದ ಸುಮಾರು 10% ಉಂಟಾಗುತ್ತದೆ. ತ್ಯಾಜ್ಯ ವಲಯದಿಂದ ಹೊರಹೊಮ್ಮುವ ಹೊರಸೂಸುವಿಕೆಯು 1994ರಿಂದ 2020ರ ನಡುವೆ 226% ಹೆಚ್ಚಾಗಿದೆ.
’ತ್ಯಾಜ್ಯದಿಂದ ಸಂಪತ್ತು’ (Waste-to-wealth) ಮಾದರಿ
ಸಾವಯವ ತ್ಯಾಜ್ಯವನ್ನು ಗೊಬ್ಬರ, ಜೈವಿಕ ಅನಿಲ (Biogas), ಬಯೋ-ಮೀಥೇನ್ ಮತ್ತು ಬಯೋ-CNG ಆಗಿ ಪರಿವರ್ತಿಸುವ ಮೂಲಕ ಭಾರತವು ಈ ಪರಿಸ್ಥಿತಿಯನ್ನು ಬದಲಾಯಿಸಬಹುದು. 2047ರ ವೇಳೆಗೆ 95% ನಗರ ಸಾವಯವ ತ್ಯಾಜ್ಯವನ್ನು ಸಂಸ್ಕರಿಸುವ ಗುರಿ ಹೊಂದಿದರೆ, ಸುಮಾರು 68 ಮಿಲಿಯನ್ ಟನ್ ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯನ್ನು ತಗ್ಗಿಸಬಹುದು.
ಸಾವಯವ ತ್ಯಾಜ್ಯದಿಂದ ಉತ್ಪತ್ತಿಯಾಗುವ ಜೈವಿಕ ಅನಿಲವನ್ನು ಶುದ್ಧೀಕರಿಸಿದರೆ ಅದು ‘ಬಯೋ-CNG’ ಆಗುತ್ತದೆ. ಪ್ರಸ್ತುತ ಭಾರತದ ತ್ಯಾಜ್ಯ ಸಂಸ್ಕರಣಾ ಸಾಮರ್ಥ್ಯದಲ್ಲಿ 96% ಕಾಂಪೋಸ್ಟಿಂಗ್ (ಗೊಬ್ಬರ) ಇದ್ದರೆ, ಬಯೋ-ಮೀಥನೇಷನ್ ಕೇವಲ 4% ಇದೆ. ಇದನ್ನು ವಿಸ್ತರಿಸುವ ಅಗತ್ಯವಿದೆ ಎಂದು CEEW ಹೇಳಿದೆ.
ಈ ಕ್ಷೇತ್ರವು ಉದ್ಯೋಗ ಸೃಷ್ಟಿಗೆ ದೊಡ್ಡ ಅವಕಾಶವಾಗಿದೆ. ದಿನಕ್ಕೆ 100 ಟನ್ ಸಂಸ್ಕರಿಸುವ ಬಯೋ-ಮೀಥನೇಷನ್ ಘಟಕವು ಸುಮಾರು 31 ಜನರಿಗೆ ಉದ್ಯೋಗ ನೀಡಬಲ್ಲದು. ಅಳವಡಿಸಲಾದ ನೀತಿಗಳ ಮೂಲಕ, ಪ್ರಸ್ತುತ ಇರುವ ಸುಮಾರು 4 ಲಕ್ಷ ಉದ್ಯೋಗಗಳನ್ನು 2047ರ ವೇಳೆಗೆ 26 ಲಕ್ಷಕ್ಕೆ ಹೆಚ್ಚಿಸಬಹುದು.
ಭಾರತವು ‘ಘನತ್ಯಾಜ್ಯ ನಿರ್ವಹಣಾ ನಿಯಮಗಳು, 2026’ ಅನ್ನು ಜಾರಿಗೆ ತಂದಿದ್ದರೂ, ಕಸ ವಿಂಗಡಣೆಯಲ್ಲಿನ ಲೋಪಗಳು, ಕಳಪೆ ಸಂಗ್ರಹಣಾ ವ್ಯವಸ್ಥೆಗಳು ಮತ್ತು ಕಸದ ಗುಣಮಟ್ಟದ ಆಧಾರದ ಮೇಲೆ ಗುತ್ತಿಗೆ ನೀಡದಿರುವುದು ದೊಡ್ಡ ಸವಾಲಾಗಿದೆ. ಮೂಲದಲ್ಲೇ ಕಸ ವಿಂಗಡಣೆ, ಉತ್ತಮ ಡೇಟಾ ನಿರ್ವಹಣೆ ಮತ್ತು ಮಾರುಕಟ್ಟೆ ಅಭಿವೃದ್ಧಿಯ ಮೂಲಕ ಮಾತ್ರ ಈ ವಲಯದ ಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಾಧ್ಯ ಎಂದು ವರದಿ ಸಲಹೆ ನೀಡಿದೆ.








