ವೈರಲ್ ಆಡಿಯೋದಲ್ಲೇನಿದೆ? ದಾವಣಗೆರೆ ಉಪಚುನಾವಣೆಯ ಸಂದರ್ಭದಲ್ಲಿ ಜಮೀರ್ ಅಹ್ಮದ್ ಹಾಗೂ ಅವರ ಆಪ್ತ ಸಿರಾಜ್ ಎಂಬುವರ ನಡುವೆ ನಡೆದಿದೆ ಎನ್ನಲಾದ ಸಂಭಾಷಣೆಯ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿಸಿತ್ತು. ಆಡಿಯೋದಲ್ಲಿ, “ಇದು ನನ್ನ ಇಜ್ಜತ್ (ಗೌರವ) ಸವಾಲು” ಎಂದು ಜಮೀರ್ ಹೇಳಿರುವುದು ಮತ್ತು ಮುಸ್ಲಿಂ ಮತದಾರರು ಕಾಂಗ್ರೆಸ್ ಬದಲಿಗೆ ಎಸ್ಡಿಪಿಐ (SDPI) ಅಭ್ಯರ್ಥಿಯ ‘ಕುಕ್ಕರ್’ ಗುರುತಿಗೆ ಮತ ಚಲಾಯಿಸುವಂತೆ ಪ್ರೇರೇಪಿಸಿರುವ ಕುರಿತು ಚರ್ಚೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಇದು ಕಾಂಗ್ರೆಸ್ ಒಳಗಿನ ಬಂಡಾಯ ಹಾಗೂ ಒಳಸಂಚಿನ ಮುಖವನ್ನು ಬಹಿರಂಗಪಡಿಸಿದೆ ಎಂದು ಪ್ರತಿಪಕ್ಷಗಳು ಟೀಕಿಸಿದ್ದವು.
ಇದು ಎಐ (AI) ಸೃಷ್ಟಿಸಿದ ನಕಲಿ ಆಡಿಯೋ: ಜಮೀರ್ ಸ್ಪಷ್ಟನೆ ಈ ಕುರಿತು ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಸಚಿವ ಜಮೀರ್ ಅಹ್ಮದ್ ಖಾನ್, “ವೈರಲ್ ಆಗಿರುವ ಆಡಿಯೋ ಸಂಪೂರ್ಣ ನಕಲಿಯಾಗಿದೆ. ಕಾಂಗ್ರೆಸ್ ಪಕ್ಷದೊಳಗೆ ಗೊಂದಲ ಮೂಡಿಸಲು ಮತ್ತು ನನ್ನ ರಾಜಕೀಯ ತೇಜೋವಧೆ ಮಾಡಲು ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಈ ಆಡಿಯೋ ಕ್ಲಿಪ್ ಸೃಷ್ಟಿಸಲಾಗಿದೆ,” ಎಂದು ಸ್ಪಷ್ಟಪಡಿಸಿದ್ದಾರೆ.
“ಚುನಾವಣೆ ಮುಗಿದ ನಂತರ ಇಂತಹ ನಕಲಿ ಆಡಿಯೋ ಹರಿಬಿಟ್ಟಿರುವುದರ ಹಿಂದೆ ದೊಡ್ಡ ಸಂಚಿದೆ. ಈ ನಕಲಿ ಆಡಿಯೋ ತಯಾರಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗುವುದು,” ಎಂದು ಅವರು ತಿಳಿಸಿದ್ದಾರೆ.
ಆಪ್ತ ಸಿರಾಜ್ ಸಮರ್ಥನೆ: ಇದೇ ವೇಳೆ ಜಮೀರ್ ಆಪ್ತ ಸಿರಾಜ್ ಕೂಡ ಮಾಧ್ಯಮಗಳೊಂದಿಗೆ ಮಾತನಾಡಿ, ಆಡಿಯೋದಲ್ಲಿರುವ ಧ್ವನಿ ತಮ್ಮದಲ್ಲ ಹಾಗೂ ಜಮೀರ್ ಅವರದ್ದೂ ಅಲ್ಲ ಎಂದು ಹೇಳಿದ್ದಾರೆ. ಉಪಚುನಾವಣೆಯ ಸಮಯ ಸಾಧಿಸಿ ರಾಜಕೀಯ ವೈರಿಗಳು ಮಾಡಿರುವ ಪಿತೂರಿ ಇದಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕಾಂಗ್ರೆಸ್ ವಲಯದಲ್ಲಿ ತಲ್ಲಣ: ಉಪಚುನಾವಣೆ ಬೆನ್ನಲ್ಲೇ ಈ ಆಡಿಯೋ ಬಾಂಬ್ ಸಿಡಿದಿರುವುದು ಕೈ ಪಾಳಯದಲ್ಲಿ ತಲ್ಲಣ ಮೂಡಿಸಿದೆ. ಈಗಾಗಲೇ ಈ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ಎಂಎಲ್ಸಿ ಅಬ್ದುಲ್ ಜಬ್ಬಾರ್ ಅವರನ್ನು ಕಾಂಗ್ರೆಸ್ ಅಮಾನತುಗೊಳಿಸಿದ್ದು, ನಸೀರ್ ಅಹ್ಮದ್ ಅವರ ಸ್ಥಾನಕ್ಕೂ ಕುತ್ತು ಬಂದಿದೆ. ಈಗ ಜಮೀರ್ ಅಹ್ಮದ್ ಅವರ ಹೆಸರೂ ಕೇಳಿಬಂದಿರುವುದರಿಂದ ಹೈಕಮಾಂಡ್ ಹಾಗೂ ಕೆಪಿಸಿಸಿ ಶಿಸ್ತು ಸಮಿತಿ ಈ ಕುರಿತು ಯಾವ ನಡೆ ಇಡಲಿದೆ ಎಂಬುದು ರಾಜ್ಯ ರಾಜಕೀಯದಲ್ಲಿ ಕುತೂಹಲ ಮೂಡಿಸಿದೆ.