ಬೆಂಗಳೂರು : ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿಯುತ್ತಿರುವ ಧಾರಾಕಾರ ಮಳೆಗೆ ಗೋಡೆ ಮತ್ತು ಕಾಂಪೌಂಡ್‌ಗಳು ಕುಸಿದು ಸರಣಿ ದುರಂತಗಳು ಸಂಭವಿಸುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಇದೀಗ ನಗರದಲ್ಲಿ ಮಳೆಯ ಆರ್ಭಟಕ್ಕೆ ಮತ್ತೊಂದು ದುರಂತ ಸಂಭವಿಸಿದ್ದು, ಕಾಂಪೌಂಡ್ ಗೋಡೆ ಕುಸಿದು ಬಿದ್ದು ಇಬ್ಬರು ಕಾರ್ಮಿಕರು ಜೀವಂತವಾಗಿ ಸಮಾಧಿಯಾದ ದಾರುಣ ಘಟನೆ ವರದಿಯಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ಬೊಮ್ಮಶಟ್ಟಿಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಕಾರ್ಮಿಕರನ್ನು ದ್ಯಾಮಪ್ಪ ಮತ್ತು ಬಾಬುಲಾಲ್ ಎಂದು ಗುರುತಿಸಲಾಗಿದೆ. ಕಳೆದ ಎರಡು ದಿನಗಳಿಂದ ಈ ಭಾಗದಲ್ಲಿ ಎಡಬಿಡದೆ ಸುರಿದ ಮಳೆಯೇ ಈ ದುರಂತಕ್ಕೆ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ.
ಕೆಲಸ ಮಾಡುತ್ತಿದ್ದಾಗಲೇ ಬಂದೆರಗಿದ ಜಮ ಬೊಮ್ಮಶಟ್ಟಿಹಳ್ಳಿ ಗ್ರಾಮದ ಪಟೇಲ್ ಎಂಬುವರಿಗೆ ಸೇರಿದ ಖಾಲಿ ಸೈಟ್‌ನಲ್ಲಿ ಗೋಡೆ ನಿರ್ಮಾಣದ ಕೆಲಸ ನಡೆಯುತ್ತಿತ್ತು. ಎಂದಿನಂತೆ ಕಾರ್ಮಿಕರಾದ ದ್ಯಾಮಪ್ಪ ಮತ್ತು ಬಾಬುಲಾಲ್ ಅವರು ಸ್ಥಳದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ, ಕಳೆದ ಕೆಲವು ದಿನಗಳಿಂದ ಸುರಿದಿದ್ದ ಮಳೆಗೆ ಅಲ್ಲಿನ ಮಣ್ಣು ಮತ್ತು ಪಕ್ಕದ ಗೋಡೆ ಸಂಪೂರ್ಣವಾಗಿ ಸಡಿಲಗೊಂಡಿತ್ತು. ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾಗಲೇ ಇದ್ದಕ್ಕಿದ್ದಂತೆ ಗೋಡೆ ಅವರ ಮೇಲೆಯೇ ಕುಸಿದು ಬಿದ್ದಿದೆ.
ಸ್ಥಳದಲ್ಲೇ ಇಬ್ಬರು ಸಾವು ಗೋಡೆ ಕುಸಿದ ರಭಸಕ್ಕೆ ಸಿಲುಕಿದ ಇಬ್ಬರು ಕಾರ್ಮಿಕರು ಭಾರಿ ಪ್ರಮಾಣದ ಇಟ್ಟಿಗೆ ಮತ್ತು ಮಣ್ಣಿನ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಇಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಘಟನೆ ಸಂಭವಿಸುತ್ತಿದ್ದಂತೆ ಸ್ಥಳೀಯರು ಧಾವಿಸಿ ಬಂದರಾದರೂ, ಅಷ್ಟರಲ್ಲೇ ತಡವಾಗಿತ್ತು. ತಕ್ಷಣವೇ ಪೊಲೀಸರು ಮತ್ತು ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು.
ನೆಲಮಂಗಲ ಶವಾಗಾರಕ್ಕೆ ಮೃತದೇಹ ರವಾನೆ ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು, ಸ್ಥಳೀಯರ ನೆರವಿನೊಂದಿಗೆ ಅವಶೇಷಗಳನ್ನು ತೆರವುಗೊಳಿಸಿ ಇಬ್ಬರು ಕಾರ್ಮಿಕರ ಮೃತದೇಹಗಳನ್ನು ಹೊರತೆಗೆದಿದ್ದಾರೆ. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಮೃತದೇಹಗಳನ್ನು ನೆಲಮಂಗಲದ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸರಣಿ ದುರಂತಗಳಿಂದ ಬೆಚ್ಚಿಬಿದ್ದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಗೆ ಕಾಂಪೌಂಡ್ ಕುಸಿದು ಪ್ರಾಣಹಾನಿಯಾಗುತ್ತಿರುವುದು ಇದು ಮೊದಲೇನಲ್ಲ. ಇತ್ತೀಚೆಗಷ್ಟೇ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಬರೋಬ್ಬರಿ 7 ಜನರು ಸಾವನ್ನಪ್ಪಿದ್ದರು. ಇದಾದ ಬೆನ್ನಲ್ಲೇ, ಮೇ 29ರಂದು ವಿಜಯನಗರದಲ್ಲಿ ಕ್ಲಬ್ ಕಾಂಪೌಂಡ್ ಗೋಡೆ ಕುಸಿದು ಓರ್ವ ಆಟೋ ಚಾಲಕ ಮೃತಪಟ್ಟಿದ್ದರು. ಇದೀಗ ಬೊಮ್ಮಶಟ್ಟಿಹಳ್ಳಿಯ ಘಟನೆ ಸೇರಿ ಮಳೆಗಾಲದ ಆರಂಭದಲ್ಲೇ ಗೋಡೆ ಕುಸಿತಕ್ಕೆ ಒಟ್ಟು 10 ಜನರು ಬಲಿಯಾದಂತಾಗಿದ್ದು, ನಗರದ ಕಟ್ಟಡಗಳ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆ ಮೂಡುವಂತೆ ಮಾಡಿದೆ.








