ಬೆಂಗಳೂರು: ಐಪಿಎಲ್ 2026ರ ಮಹಾ ಸಂಗ್ರಾಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆಯಲಿರುವ ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಮಹತ್ವದ ಪಂದ್ಯದ ಹಿನ್ನೆಲೆಯಲ್ಲಿ ಇಡೀ ದೇಶಾದ್ಯಂತ ಕ್ರಿಕೆಟ್ ಜ್ವರ ಏರಿದ್ದು, ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆರ್‌ಸಿಬಿ ಅಭಿಮಾನಿಗಳ ಸಂಭ್ರಮ ಮತ್ತು ಕ್ರೇಜ್ ಮುಗಿಲು ಮುಟ್ಟಿದೆ.
ಜರ್ಸಿ ಬಿಟ್ಟು ಬ್ಲೌಸ್ ವಿನ್ಯಾಸದ ಮೂಲಕ ಮಿಂಚಿದ ಮಾಡೆಲ್
ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯಗಳಿದ್ದಾಗ ಅಭಿಮಾನಿಗಳು ತಮ್ಮ ನೆಚ್ಚಿನ ತಂಡದ ಜರ್ಸಿ ತೊಟ್ಟು ಬೆಂಬಲ ಸೂಚಿಸುವುದು ಮಾಮೂಲಿ. ಆದರೆ, ಬೆಂಗಳೂರಿನ ಖ್ಯಾತ ಡಿಸೈನರ್ ಹಾಗೂ ಮಾಡೆಲ್ ಆಗಿರುವ ಅಂಜಲಿ ಅವರು ಅತ್ಯಂತ ವಿಭಿನ್ನವಾಗಿ ತಮ್ಮ ಅಭಿಮಾನವನ್ನು ತೋರ್ಪಡಿಸಿದ್ದಾರೆ. ಆರ್‌ಸಿಬಿ ಮೇಲಿನ ಅಪ್ಪಟ ಪ್ರೀತಿಯಿಂದ ತಾವೇ ಸ್ವತಃ ವಿಶೇಷವಾದ ಬ್ಲೌಸ್ ಒಂದನ್ನು ವಿನ್ಯಾಸಗೊಳಿಸಿ, ಅದನ್ನು ಧರಿಸುವ ಮೂಲಕ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕರಲ್ಲಿ ಭಾರೀ ಗಮನ ಸೆಳೆದಿದ್ದಾರೆ.
ಬ್ಲೌಸ್ ಮೇಲಿದೆ ಆರ್‌ಸಿಬಿ ಲೋಗೋ ಹಾಗೂ ಕರ್ನಾಟಕ ಮ್ಯಾಪ್!
ತಾವು ಸಿದ್ಧಪಡಿಸಿದ ಈ ವಿಶಿಷ್ಟ ಉಡುಪಿನ ಬಗ್ಗೆ ಮಾತನಾಡಿರುವ ಅಂಜಲಿ, “ಪಂದ್ಯದ ದಿನ ಎಲ್ಲರೂ ಜರ್ಸಿ ಧರಿಸುವುದು ಸಾಮಾನ್ಯ. ಹಾಗಾಗಿ ನಾನು ಸ್ವಲ್ಪ ಡಿಫರೆಂಟ್ ಆಗಿ ಏನಾದರೂ ಮಾಡಬೇಕು ಎಂದು ಯೋಚಿಸಿದೆ. ಅದಕ್ಕಾಗಿಯೇ ಈ ಬ್ಲೌಸ್ ವಿನ್ಯಾಸಗೊಳಿಸಿದ್ದು, ಇದರಲ್ಲಿ ಆರ್‌ಸಿಬಿ ಲೋಗೋ ಜೊತೆಗೆ ನಮ್ಮ ಹೆಮ್ಮೆಯ ಕರ್ನಾಟಕ ರಾಜ್ಯದ ಮ್ಯಾಪ್ (ನಕ್ಷೆ) ಇರುವಂತೆ ಡಿಸೈನ್ ಮಾಡಿದ್ದೇನೆ” ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ಮೂಲಕ ಅವರು ತಮ್ಮ ನೆಚ್ಚಿನ ತಂಡ ಹಾಗೂ ರಾಜ್ಯದ ಮೇಲಿನ ಅಭಿಮಾನವನ್ನು ಒಟ್ಟಿಗೆ ಪ್ರದರ್ಶಿಸಿದ್ದಾರೆ.
ಕಿಂಗ್ ಕೊಹ್ಲಿ ಶತಕ ಬಾರಿಸಲಿ ಎಂಬ ಹಾರೈಕೆ
ಇದೇ ವೇಳೆ ಕಿಂಗ್ ವಿರಾಟ್ ಕೊಹ್ಲಿ ಅವರ ಆಟದ ಬಗ್ಗೆ ಭಾರೀ ವಿಶ್ವಾಸ ವ್ಯಕ್ತಪಡಿಸಿರುವ ಅಂಜಲಿ, ಇಂದಿನ ಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು ಭರ್ಜರಿ ಶತಕ ಬಾರಿಸಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಆರ್‌ಸಿಬಿ ಈ ಬಾರಿ ಟ್ರೋಫಿ ಎತ್ತಿ ಹಿಡಿಯುವುದನ್ನು ನೋಡಲು ಇಡೀ ಕರ್ನಾಟಕವೇ ಕಾಯುತ್ತಿದ್ದು, ಅಂಜಲಿ ಅವರ ಈ ವಿಭಿನ್ನ ಶೈಲಿಯ ಹಾರೈಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
“ನಾನು ಕೂಡ ಆರ್‌ಸಿಬಿ ತಂಡದ ದೊಡ್ಡ ಅಭಿಮಾನಿ. ‘ಈ ಸಲ ಕಪ್ ನಮ್ದೇ’ ಅನ್ನೋದು ನಮ್ಮ ಆಸೆ. ಆರ್‌ಸಿಬಿ ಖಂಡಿತಾ ಗೆದ್ದು ಬರಲಿದೆ. ಪಂದ್ಯ ಅಹಮದಾಬಾದ್‌ನಲ್ಲಿ ನಡೆಯುತ್ತಿರುವುದರಿಂದ ನಮಗೆ ಅಲ್ಲಿಗೆ ಹೋಗಿ ಪಂದ್ಯ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಆದರೇನಂತೆ, ನಮ್ಮ ಬೆಂಗಳೂರಿನಿಂದಲೇ ನಾವು ಆರ್‌ಸಿಬಿ ತಂಡಕ್ಕೆ ಭರ್ಜರಿ ಸಪೋರ್ಟ್ ಮಾಡುತ್ತಿದ್ದೇವೆ.” – ಅಂಜಲಿ, ಡಿಸೈನರ್ & ಮಾಡೆಲ್








