ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ನೂತನ ಸಚಿವ ಸಂಪುಟ ರಚನೆಯ ಕಸರತ್ತು ಅಂತಿಮ ಘಟ್ಟ ತಲುಪುತ್ತಿರುವ ಬೆನ್ನಲ್ಲೇ, ಹಿರಿಯ ನಾಯಕರಲ್ಲಿ ಅಸಮಾಧಾನ ಸ್ಫೋಟಗೊಂಡಿದೆ. ಪ್ರಮುಖವಾಗಿ ದಲಿತ ಕೋಟಾದ ಅಡಿಯಲ್ಲಿ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನಕ್ಕಾಗಿ ಪಕ್ಷದೊಳಗೆ ತೀವ್ರ ಪೈಪೋಟಿ ಆರಂಭವಾಗಿದ್ದು, ಇದು ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಮಾಜಿ ಡಿಸಿಎಂ ಡಾ. ಜಿ. ಪರಮೇಶ್ವರ್ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ನಡುವೆ ಈ ಉನ್ನತ ಹುದ್ದೆಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗಷ್ಟೇ ನವದೆಹಲಿಗೆ ಭೇಟಿ ನೀಡಿದ್ದ ಡಾ. ಜಿ. ಪರಮೇಶ್ವರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಪಕ್ಷದ ವರಿಷ್ಠರ ಮೇಲೆ ತೀವ್ರ ಒತ್ತಡ ಹೇರಿದ್ದಾರೆ ಎನ್ನಲಾಗಿದೆ. ಈ ಬಾರಿ ತಮಗೆ ಉಪಮುಖ್ಯಮಂತ್ರಿ ಹುದ್ದೆಯ ಜೊತೆಗೆ ಪ್ರಬಲ ಖಾತೆಯನ್ನೇ ನೀಡಬೇಕು ಎಂದು ಅವರು ಹಠ ಹಿಡಿದಿದ್ದಾರೆ. ಪಕ್ಷಕ್ಕಾಗಿ ತಾವು ನೀಡಿರುವ ಕೊಡುಗೆ ಮತ್ತು ಹಿರಿತನವನ್ನು ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡದಿದ್ದರೆ ತಮಗೆ ಮಂತ್ರಿ ಸ್ಥಾನವೇ ಬೇಡ ಎಂದು ಪರಮೇಶ್ವರ್ ವರಿಷ್ಠರ ಸಮ್ಮುಖದಲ್ಲೇ ನೇರವಾಗಿಯೇ ಸಮಾಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.
ಪರಮೇಶ್ವರ್ ಅವರ ಖಡಕ್ ನಿಲುವು: “ನನಗೆ ಗೌರವಯುತ ಸ್ಥಾನಮಾನ ಸಿಗದಿದ್ದರೆ ಸಚಿವ ಸ್ಥಾನವೇ ಬೇಡ, ನಾನು ಕೇವಲ ಶಾಸಕನಾಗಿಯೇ ಉಳಿಯಲು ಸಿದ್ಧ. ಕಳೆದ ಬಾರಿ ನೀಡಿದ್ದ ಗೃಹ ಇಲಾಖೆಯೂ ನನಗೆ ಬೇಡ.” ಎಂದು ಅವರು ಮಲ್ಲಿಕಾರ್ಜುನ ಖರ್ಗೆ ಅವರ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕಳೆದ ಅವಧಿಯಲ್ಲಿ ತಾವು ನಿಭಾಯಿಸಿದ್ದ ಗೃಹ ಇಲಾಖೆಗಿಂತಲೂ ಅತ್ಯಂತ ಪ್ರಬಲ ಹಾಗೂ ಆಯಕಟ್ಟಿನ ಖಾತೆಗಾಗಿ ಜಿ. ಪರಮೇಶ್ವರ್ ದೆಹಲಿ ಮಟ್ಟದಲ್ಲಿ ಭರ್ಜರಿ ಲಾಬಿ ನಡೆಸಿದ್ದಾರೆ. ಒಂದು ವೇಳೆ ಹೈಕಮಾಂಡ್ ತಮ್ಮ ಬೇಡಿಕೆಗೆ ಮಣಿಯದಿದ್ದರೆ, ಸಂಪುಟದಿಂದ ಹೊರಗುಳಿದು ಕೇವಲ ಶಾಸಕರಾಗಿ ಮುಂದುವರಿಯುವ ಕಠಿಣ ನಿರ್ಧಾರಕ್ಕೂ ಅವರು ಸಜ್ಜಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದು ಪಕ್ಷದ ಆಂತರಿಕ ವಲಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ.
ಮತ್ತೊಂದೆಡೆ, ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಹಾಗೂ ಯುವ ನಾಯಕ ಪ್ರಿಯಾಂಕ್ ಖರ್ಗೆ ಕೂಡ ದಲಿತ ಕೋಟಾದಡಿ ಡಿಸಿಎಂ ರೇಸ್‌ನಲ್ಲಿದ್ದಾರೆ. ತಂದೆಯ ವರ್ಚಸ್ಸು ಹಾಗೂ ಹೈಕಮಾಂಡ್ ಮಟ್ಟದ ಪ್ರಭಾವ ಪ್ರಿಯಾಂಕ್ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಹಿರಿಯ ಮತ್ತು ಕಿರಿಯ ನಾಯಕರ ನಡುವಿನ ಈ ‘ದಳಪತಿ’ಗಳ ಹೋರಾಟ ಕಾಂಗ್ರೆಸ್ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ಅಂತಿಮವಾಗಿ ಹೈಕಮಾಂಡ್ ಯಾರ ಕೈ ಹಿಡಿಯಲಿದೆ ಮತ್ತು ಈ ಅಸಮಾಧಾನವನ್ನು ಹೇಗೆ ತಣ್ಣಗಾಗಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.








