ಮಂತ್ರಾಲಯ: ಇಲ್ಲಿನ ಪ್ರಸಿದ್ಧ ಪುಣ್ಯಕ್ಷೇತ್ರ ಮಂತ್ರಾಲಯದ ಬಳಿ ಹರಿಯುವ ತುಂಗಭದ್ರಾ ನದಿಯಲ್ಲಿ ನಿನ್ನೆ ಈಜಲು ತೆರಳಿದ್ದ ಒಂದೇ ಕುಟುಂಬದ ಐವರು ನೀರುಪಾಲಾದ ಅತ್ಯಂತ ದುರ್ದೈವಿ ಘಟನೆ ಸಂಭವಿಸಿದೆ. ಈ ಪೈಕಿ ಇದುವರೆಗೆ ಮೂವರ ಮೃತದೇಹಗಳು ಪತ್ತೆಯಾಗಿದ್ದು, ನಾಪತ್ತೆಯಾಗಿರುವ ಇನ್ನಿಬ್ಬರಿಗಾಗಿ ನದಿಯಲ್ಲಿ ತೀವ್ರ ಶೋಧ ಕಾರ್ಯ ಮುಂದುವರೆದಿದೆ.
ತಂದೆ-ಮಗ ಸೇರಿ ಮೂವರ ಶವ ಪತ್ತೆ: ನದಿಯಲ್ಲಿ ಮುಳುಗಿ ಮೃತಪಟ್ಟವರಲ್ಲಿ ಹೈದರಾಬಾದ್ ಮೂಲದ ತಂದೆ ಮತ್ತು ಮಗನ ಮೃತದೇಹಗಳು ಇಂದು ಪತ್ತೆಯಾಗಿವೆ. ಮೃತರನ್ನು ತಂದೆ ಸತೀಶ್ (35) ಮತ್ತು ಅವರ ಐದು ವರ್ಷದ ಪುತ್ರ ಯಮನ ಚಂದ್ರ ಎಂದು ಗುರುತಿಸಲಾಗಿದೆ. ಇದಕ್ಕೂ ಮುನ್ನ ನಿನ್ನೆಯೇ ಧನುಷ್ (23) ಎಂಬ ಯುವಕನ ಶವ ಸಿಕ್ಕಿತ್ತು. ಸದ್ಯಕ್ಕೆ ಮೂವರ ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
ಇನ್ನಿಬ್ಬರಿಗಾಗಿ ಮುಂದುವರಿದ ಶೋಧ ಕಾರ್ಯ: ಇದೇ ಘಟನೆಯಲ್ಲಿ ನಾಪತ್ತೆಯಾಗಿರುವ ರಾಘವೇಂದ್ರ (25) ಮತ್ತು ಸಂಧ್ಯಾ (23) ಎಂಬುವವರಿಗಾಗಿ ನದಿಯಲ್ಲಿ ವ್ಯಾಪಕ ಹುಡುಕಾಟ ನಡೆಸಲಾಗುತ್ತಿದೆ. ಸ್ಥಳೀಯ ಮೀನುಗಾರರು, ಆಂಧ್ರಪ್ರದೇಶದ ವಿಪತ್ತು ಸ್ಪಂದನಾ ಪಡೆ (SDRF) ಮತ್ತು ಮಂತ್ರಾಲಯ ಪೊಲೀಸರು ಜಂಟಿಯಾಗಿ ಜಾಲದ ಮೂಲಕ ಹಾಗೂ ದೋಣಿಗಳ ಸಹಾಯದಿಂದ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ.
ಪೂಜೆಗೆ ಬಂದಿದ್ದವರ ಬಾಳಲ್ಲಿ ಕತ್ತಲು: ಮೃತರೆಲ್ಲರೂ ಹೈದರಾಬಾದ್ನಿಂದ ಮಂತ್ರಾಲಯದಲ್ಲಿದ್ದ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದರು ಎನ್ನಲಾಗಿದೆ. ಅಲ್ಲಿ ಹಮ್ಮಿಕೊಳ್ಳಲಾಗಿದ್ದ ಸತ್ಯನಾರಾಯಣ ಸ್ವಾಮಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಪೂಜಾ ಕಾರ್ಯಕ್ರಮ ಮುಗಿದ ಬಳಿಕ ಎಲ್ಲರೂ ಸೇರಿ ತುಂಗಭದ್ರಾ ನದಿಗೆ ಸ್ನಾನ ಹಾಗೂ ಈಜಲು ತೆರಳಿದ್ದಾರೆ. ಆದರೆ ನದಿಯ ನೀರಿನ ಆಳ ಮತ್ತು ಸುಳಿಯ ಅರಿವಿಲ್ಲದೆ ಇಳಿದಿದ್ದರಿಂದ ಈ ಭೀಕರ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಕುಟುಂಬಸ್ಥರ ಆಕ್ರಂದನ – ಪ್ರಕರಣ ದಾಖಲು: ಒಂದೇ ಕುಟುಂಬದ ಐವರು ಕಣ್ಣೆದುರೇ ನದಿಯಲ್ಲಿ ಕೊಚ್ಚಿಹೋಗಿ, ಮೂವರು ಶವವಾಗಿ ಪತ್ತೆಯಾಗಿರುವುದರಿಂದ ಮೃತರ ಕುಟುಂಬದಲ್ಲಿ ಆಕ್ರಂದನ ಮುಗಿಲುಮುಟ್ಟಿದೆ. ಹಬ್ಬದಂತಿರಬೇಕಾಗಿದ್ದ ಮನೆಯಲ್ಲಿ ಸದ್ಯ ಸೂತಕದ ಛಾಯೆ ಆವರಿಸಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.








