ಬೆಂಗಳೂರು: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಬಹುಕೋಟಿ ಬಿಟ್ ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯ (ED) ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮೊಹಮ್ಮದ್ ನಲಪಾಡ್ಗೆ ಮತ್ತೊಮ್ಮೆ ಸಮನ್ಸ್ ಜಾರಿ ಮಾಡಿದೆ. ಸೋಮವಾರ (ಜೂನ್ 1) ವಿಚಾರಣೆಗೆ ಕಡ್ಡಾಯವಾಗಿ ಹಾಜರಾಗುವಂತೆ ಇಡಿ ಅಧಿಕಾರಿಗಳು ಸೂಚಿಸಿದ್ದಾರೆ.
ಕಳೆದ ಶುಕ್ರವಾರವೇ ನಲಪಾಡ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಮೊದಲ ಬಾರಿಗೆ ಸಮನ್ಸ್ ನೀಡಿತ್ತು. ಆದರೆ, ಪ್ರಸ್ತುತ ರಾಜಕೀಯ ವಿದ್ಯಮಾನಗಳ ಹಿನ್ನೆಲೆಯಲ್ಲಿ ಅವರು ವಿಚಾರಣೆಯಿಂದ ವಿನಾಯಿತಿ ಕೋರಿದ್ದರು. ಈ ಮನವಿಯನ್ನು ಪರಿಗಣಿಸಿದ್ದ ಅಧಿಕಾರಿಗಳು ತಾತ್ಕಾಲಿಕ ವಿನಾಯಿತಿ ನೀಡಿದ್ದರು. ಆದರೆ ಇದೀಗ ತನಿಖೆಯನ್ನು ಚುರುಕುಗೊಳಿಸಿರುವ ಇಡಿ, ಸೋಮವಾರವೇ ವಿಚಾರಣೆಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಬೇಕು ಎಂದು ಕಡಕ್ ಆದೇಶ ನೀಡಿದೆ.
ಈ ಬಹುಕೋಟಿ ಬಿಟ್ಕಾಯಿನ್ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಈಗಾಗಲೇ ಮೂವರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದು, ಅವರಿಂದ ಮಹತ್ವದ ಮಾಹಿತಿ ಕಲೆಹಾಕುತ್ತಿದೆ.ಇತ್ತೀಚೆಗಷ್ಟೇ ಬೆಂಗಳೂರಿನ ಅಶೋಕನಗರದಲ್ಲಿರುವ ಮೊಹಮ್ಮದ್ ನಲಪಾಡ್ ಅವರ ನಿವಾಸದ ಮೇಲೆ ಇಡಿ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದರು. ಸತತ 21 ಗಂಟೆಗಳ ಕಾಲ ನಡೆದ ಈ ಶೋಧ ಕಾರ್ಯದಲ್ಲಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು.
ದಾಳಿಯ ವೇಳೆ ನಲಪಾಡ್ ನಿವಾಸದಿಂದ ಪ್ರಮುಖ ಹಾರ್ಡ್ಡಿಸ್ಕ್ಗಳು, ಕಂಪ್ಯೂಟರ್ ಡಿವೈಸ್ಗಳು ಹಾಗೂ ವಿದೇಶಿ ವ್ಯವಹಾರಗಳಿಗೆ ಸಂಬಂಧಿಸಿದ ಬ್ಯಾಂಕ್ ದಾಖಲೆಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಈ ದಾಖಲೆಗಳ ಆಧಾರದ ಮೇಲೆಯೇ ಈಗ ನಲಪಾಡ್ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲು ಇಡಿ ಸಜ್ಜಾಗಿದೆ.








