ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರಿ ಕುತೂಹಲ ಮೂಡಿಸಿದ್ದ ಬೆಳವಣಿಗೆಗೆ ತೆರೆ ಬಿದ್ದಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದು, ರಾಜ್ಯಪಾಲರು ಸರ್ಕಾರ ರಚಿಸಲು ಹಸಿರು ನಿಶಾನೆ ತೋರಿದ್ದಾರೆ.
ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಜೂನ್ 3ರಂದು ಸಂಜೆ 4.05ಕ್ಕೆ ಲೋಕಭವನದ ಗಾಜಿನ ಮನೆಯಲ್ಲಿ ಅದ್ಧೂರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ದಶಕಗಳ ಕಾಲದ ಅವರ ಅವಿರತ ಶ್ರಮ ಮತ್ತು ಹೋರಾಟಕ್ಕೆ ಕೊನೆಗೂ ಪ್ರತಿಫಲ ಸಿಕ್ಕಂತಾಗಿದೆ.
ಮೊದಲ ಹಂತದಲ್ಲೇ ಸಂಪುಟ ಸೇರಲು ಭರ್ಜರಿ ಲಾಬಿ!
ನೂತನ ಮುಖ್ಯಮಂತ್ರಿಯ ಪ್ರಮಾಣ ವಚನ ಕಾರ್ಯಕ್ರಮದ ಜೊತೆಯಲ್ಲೇ ಅವರ ಹೊಸ ಸಚಿವ ಸಂಪುಟದ ಸದಸ್ಯರ ಮೊದಲ ಪಟ್ಟಿ ಕೂಡ ಹೊರಬೀಳುವ ಸಾಧ್ಯತೆ ಇದೆ. ಮೊದಲ ಹಂತದಲ್ಲೇ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ಶಾಸಕರಲ್ಲಿ ಭರ್ಜರಿ ಲಾಬಿ ಹಾಗೂ ಕಸರತ್ತು ಶುರುವಾಗಿದೆ. ಹೈಕಮಾಂಡ್‌ನೊಂದಿಗೆ ಚರ್ಚಿಸಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲು ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ನಾಳೆ (ಸೋಮವಾರ) ದೆಹಲಿಗೆ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ. ಮೊದಲ ಹಂತದಲ್ಲಿ ಸಿಎಂ ಸೇರಿದಂತೆ ಕೇವಲ 9 ಮಂದಿ ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿದ್ದು ನೇತೃತ್ವದಲ್ಲಿ ಕೋರ್ ಕಮಿಟಿ?
ಹೊಸ ಸರ್ಕಾರಕ್ಕೆ ಸೂಕ್ತ ಮಾರ್ಗದರ್ಶನ ನೀಡಲು ಹಾಗೂ ಸಮನ್ವಯತೆ ಕಾಯ್ದುಕೊಳ್ಳಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಹಿರಿಯ ನಾಯಕರನ್ನೊಳಗೊಂಡ ‘ಕೋರ್ ಕಮಿಟಿ’ ಅಥವಾ ‘ಮಾರ್ಗದರ್ಶಕ ಸಮಿತಿ’ ರಚಿಸಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿದೆ ಎನ್ನಲಾಗಿದೆ. 9 ಸಚಿವರು ಹಾಗೂ ಪ್ರಮುಖ ನಾಯಕರನ್ನು ಒಳಗೊಂಡ ಈ ಸಮಿತಿಯು ಸರ್ಕಾರದ ಆಡಳಿತಕ್ಕೆ ನೆರವಾಗಲಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ
ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದರಿಂದ, ಪ್ರಸ್ತುತ ಅವರು ಅಲಂಕರಿಸಿರುವ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ನಾಯಕರ ಹುಡುಕಾಟ ಆರಂಭವಾಗಿದೆ. ಅಧ್ಯಕ್ಷ ಗಾದಿಯ ರೇಸ್‌ನಲ್ಲಿ ಪ್ರಮುಖವಾಗಿ:
ಸತೀಶ್ ಜಾರಕಿಹೊಳಿ (ನಾಯಕ ಸಮುದಾಯ)
ಡಾ. ಜಿ. ಪರಮೇಶ್ವರ್ (ಪರಿಶಿಷ್ಟ ಜಾತಿ)
ಬಿ.ಕೆ. ಹರಿಪ್ರಸಾದ್ (ಹಿಂದುಳಿದ ವರ್ಗ)
ಅವರ ಹೆಸರುಗಳು ಮುಂಚೂಣಿಯಲ್ಲಿದ್ದು, ಪಕ್ಷದ ಹೈಕಮಾಂಡ್ ಯಾರಿಗೆ ಮಣೆ ಹಾಕಲಿದೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.








