ದೇಶಾದ್ಯಂತದ ಎಲ್ಲಾ ಹೈಕೋರ್ಟ್ಗಳಲ್ಲಿ ಜಾಮೀನು ಅರ್ಜಿಗಳ ವಿಚಾರಣೆಯನ್ನು ಅಂದೇ ಅಥವಾ ಗರಿಷ್ಠ 24 ಗಂಟೆಗಳ ಒಳಗೆ ಇತ್ಯರ್ಥಪಡಿಸಬೇಕೆಂದು ಸುಪ್ರೀಂ ಕೋರ್ಟ್ ಶುಕ್ರವಾರ ಮಹತ್ವದ ಮತ್ತು ಬದ್ಧತೆಯನ್ನು ಉಳ್ಳ ನಿರ್ದೇಶನಗಳನ್ನು ನೀಡಿದೆ. ಅಲ್ಲದೆ, ಕಾಯ್ದಿರಿಸಿದ ತೀರ್ಪುಗಳನ್ನು ಪ್ರಕಟಿಸಲು ಕಟ್ಟುನಿಟ್ಟಾದ ಮೂರು ತಿಂಗಳ ಗಡುವನ್ನು ನಿಗದಿಪಡಿಸಿದೆ.
ವೈಯಕ್ತಿಕ ಸ್ವಾತಂತ್ರ್ಯ ಮತ್ತು ಶೀಘ್ರ ನ್ಯಾಯದಾನದ ಮೇಲೆ ಪರಿಣಾಮ ಬೀರುವ ನ್ಯಾಯಾಂಗ ವಿಳಂಬಗಳನ್ನು ನಿಭಾಯಿಸಲು ಕೈಗೊಂಡಿರುವ ಈ ಐತಿಹಾಸಿಕ ಕ್ರಮದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜಾಯ್ಮಾಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು ಸಂವಿಧಾನದ 142ನೇ ವಿಧಿಯಡಿ ತನ್ನ ಅಸಾಧಾರಣ ಅಧಿಕಾರವನ್ನು ಚಲಾಯಿಸಿದೆ. “ಪಕ್ಷಗಳಿಗೆ ಸಂಪೂರ್ಣ ನ್ಯಾಯ ಒದಗಿಸಲು” ಸುಪ್ರೀಂ ಕೋರ್ಟ್ನ ಹಸ್ತಕ್ಷೇಪ ಅಗತ್ಯವಾಗಿತ್ತು ಎಂದು ಪೀಠವು ಅಭಿಪ್ರಾಯಪಟ್ಟಿದೆ.
ಈ ತೀರ್ಪು ಎಲ್ಲಾ ಹೈಕೋರ್ಟ್ಗಳಿಗೆ ಬದ್ಧ ಕಾನೂನಾಗಿ ಕಾರ್ಯನಿರ್ವಹಿಸಲಿದ್ದು, ದಾವೆದಾರರಿಗೆ ಜಾರಿಯಾಗಬಲ್ಲ ಪರಿಹಾರಗಳು, ಸ್ವಯಂಚಾಲಿತ ಮೇಲ್ವಿಚಾರಣಾ ವ್ಯವಸ್ಥೆಗಳು ಮತ್ತು ನಿಗದಿತ ಕಾಲಮಿತಿಯೊಳಗೆ ತೀರ್ಪು ನೀಡಲು ವಿಫಲವಾದ ನ್ಯಾಯಾಧೀಶರಿಂದ ಪ್ರಕರಣಗಳನ್ನು ಮರುಹಂಚಿಕೆ ಮಾಡುವಂತಹ ಸುಧಾರಣೆಗಳನ್ನು ಪರಿಚಯಿಸಿದೆ. ಹಿರಿಯ ವಕೀಲ ಫೌಜಿಯಾ ಶಕೀಲ್ ಅವರು ನ್ಯಾಯಾಲಯಕ್ಕೆ ಅಮಿಕಸ್ ಕ್ಯೂರಿ (ನ್ಯಾಯಾಲಯದ ಸ್ನೇಹಿತ) ಆಗಿ ಸಹಾಯ ಮಾಡಿದರು.
ಪೀಠವು ನಿರ್ದೇಶಿಸಿದ ಕೆಲವು ಪ್ರಮುಖಾಂಶಗಳು ಇಲ್ಲಿವೆ:
ತೀರ್ಪುಗಳ ಕಾಲಮಿತಿ: ತೀರ್ಪನ್ನು ಕಾಯ್ದಿರಿಸಿದ ದಿನಾಂಕದಿಂದ ಗರಿಷ್ಠ ಮೂರು ತಿಂಗಳ ಅವಧಿಯೊಳಗೆ ನ್ಯಾಯಾಲಯಗಳು ತಾರ್ಕಿಕ ತೀರ್ಪನ್ನು ನೀಡಲು “ಪ್ರಯತ್ನಿಸಬೇಕು”.
ವೈಯಕ್ತಿಕ ಸ್ವಾತಂತ್ರ್ಯದ ಪ್ರಕರಣಗಳು: ನಿಯಮಿತ ಜಾಮೀನು, ನಿರೀಕ್ಷಣಾ ಜಾಮೀನು, ಅಪರಾಧಿ ಬಂಧನದಲ್ಲಿರುವ ಕ್ರಿಮಿನಲ್ ಮೇಲ್ಮನವಿಗಳು ಮತ್ತು ಮರಣ ದಂಡನೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಹೈಕೋರ್ಟ್ಗಳು “ಹೆಚ್ಚುವರಿ ತುರ್ತು” (extra promptitude) ಪ್ರದರ್ಶಿಸಬೇಕು.
ಜಾಮೀನು ಆದೇಶ: “ಜಾಮೀನು ಅರ್ಜಿ ವಿಚಾರಣೆ ಮುಗಿದ ತಕ್ಷಣ, ಆದೇಶವನ್ನು ಅಂದೇ ಪ್ರಕಟಿಸಬೇಕು ಮತ್ತು ಅಪ್ಲೋಡ್ ಮಾಡಬೇಕು. ಆದೇಶವನ್ನು ಕಾಯ್ದಿರಿಸಿದರೆ, ಮರುದಿನವೇ ಅದನ್ನು ಪ್ರಕಟಿಸಿ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಬೇಕು.”
ಜೈಲು ಅಧಿಕಾರಿಗಳಿಗೆ ಮಾಹಿತಿ: ಜಾಮೀನು ಮಂಜೂರು ಮಾಡುವ, ಶಿಕ್ಷೆಯನ್ನು ಅಮಾನತುಗೊಳಿಸುವ ಅಥವಾ ಖುಲಾಸೆಗೊಳಿಸುವ ಆದೇಶಗಳನ್ನು ತೀರ್ಪು ಪ್ರಕಟವಾದ ದಿನವೇ ಜೈಲು ಅಧಿಕಾರಿಗಳು ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ತಲುಪಿಸಬೇಕು.
ಬಿಡುಗಡೆ ಪ್ರಕ್ರಿಯೆ: ವಿಚಾರಣಾಧೀನ ಕೈದಿಗಳು ಅಥವಾ ಅಪರಾಧಿಗಳನ್ನು ಸಾಮಾನ್ಯವಾಗಿ ಅಂದೇ ಅಥವಾ ಗರಿಷ್ಠ ಮರುದಿನ ಬಿಡುಗಡೆ ಮಾಡಬೇಕು.
ತಾರ್ಕಿಕ ತೀರ್ಪಿನ ಅಪ್ಲೋಡ್: ಮುಕ್ತ ನ್ಯಾಯಾಲಯದಲ್ಲಿ ಪ್ರಕಟಿಸಲಾದ ಪ್ರತಿಯೊಂದು ತಾರ್ಕಿಕ ತೀರ್ಪನ್ನು 24 ಗಂಟೆಯೊಳಗೆ ಹೈಕೋರ್ಟ್ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ. ತುರ್ತು ಸಂದರ್ಭಗಳಲ್ಲಿ ವಿಸ್ತೃತ ತೀರ್ಪನ್ನು 7 ರಿಂದ 15 ದಿನಗಳೊಳಗೆ ಅಪ್ಲೋಡ್ ಮಾಡಬೇಕು.
ಮೇಲ್ವಿಚಾರಣಾ ಕಾರ್ಯವಿಧಾನ:
ನ್ಯಾಯಾಲಯಗಳು ತೀರ್ಪುಗಳನ್ನು ವಿಳಂಬಗೊಳಿಸುವುದನ್ನು ಮೇಲ್ವಿಚಾರಣೆ ಮಾಡಲು ಕಟ್ಟುನಿಟ್ಟಾದ ವ್ಯವಸ್ಥೆಯನ್ನು ರೂಪಿಸಲಾಗಿದೆ.
ಪ್ರತಿ ತಿಂಗಳು ಕಾಯ್ದಿರಿಸಲಾದ ತೀರ್ಪುಗಳ ವಿವರಗಳನ್ನು ಒಳಗೊಂಡ ಸ್ವಯಂಚಾಲಿತ ಇಮೇಲ್ ಎಚ್ಚರಿಕೆಗಳನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಮತ್ತು ಸಂಬಂಧಪಟ್ಟ ನ್ಯಾಯಪೀಠಕ್ಕೆ ಕಳುಹಿಸಬೇಕು.
ತೀರ್ಪು ನೀಡಲು ಮೂರು ತಿಂಗಳಿಗಿಂತ ಹೆಚ್ಚು ವಿಳಂಬವಾದರೆ, ಮುಖ್ಯ ನ್ಯಾಯಮೂರ್ತಿಗಳು ಆ ಪ್ರಕರಣವನ್ನು ಬೇರೆ ಪೀಠಕ್ಕೆ ವರ್ಗಾಯಿಸಲು ಅವಕಾಶವಿದೆ.
ದಾವೆದಾರರು ಕೂಡಾ ಮೂರು ತಿಂಗಳ ನಂತರ ತೀರ್ಪು ಪ್ರಕಟಣೆಗೆ ಅರ್ಜಿ ಸಲ್ಲಿಸಲು ಹಕ್ಕನ್ನು ಹೊಂದಿರುತ್ತಾರೆ.
ಪಾರದರ್ಶಕತೆ:
ತೀರ್ಪಿನ ಪ್ರಮಾಣೀಕೃತ ಪ್ರತಿಗಳಲ್ಲಿ ತೀರ್ಪು ಕಾಯ್ದಿರಿಸಿದ ದಿನಾಂಕ, ಪ್ರಕಟಿಸಿದ ದಿನಾಂಕ ಮತ್ತು ಅಪ್ಲೋಡ್ ಮಾಡಿದ ದಿನಾಂಕಗಳನ್ನು ಕಡ್ಡಾಯವಾಗಿ ನಮೂದಿಸಬೇಕು. ವಿಚಾರಣೆ ಮುಗಿದ ತಕ್ಷಣ ವೆಬ್ಸೈಟ್ನಲ್ಲಿ ‘ತೀರ್ಪು ಕಾಯ್ದಿರಿಸಲಾಗಿದೆ’ ಎಂದು ನಮೂದಿಸಬೇಕು. ತೀರ್ಪನ್ನು ಅಪ್ಲೋಡ್ ಮಾಡಿದ ತಕ್ಷಣ ವಕೀಲರಿಗೆ ಇಮೇಲ್ ಮತ್ತು SMS ಮೂಲಕ ಮಾಹಿತಿ ಕಳುಹಿಸಬೇಕು.
ಜಾರ್ಖಂಡ್ ಪ್ರಕರಣವೊಂದರ ವಿಚಾರಣೆ ವೇಳೆ ಜೀವಾವಧಿ ಕೈದಿಗಳ ಮೇಲ್ಮನವಿಗಳು ವರ್ಷಗಳವರೆಗೆ ಬಾಕಿ ಉಳಿದಿರುವುದನ್ನು ಗಮನಿಸಿದ ಸುಪ್ರೀಂ ಕೋರ್ಟ್, ಈ ಐತಿಹಾಸಿಕ ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ.








