ಬೆಂಗಳೂರು: ಸಿಲಿಕಾನ್ ಸಿಟಿ ಸೇರಿದಂತೆ ಇಡೀ ಕರ್ನಾಟಕದಲ್ಲಿ ಸೈಬರ್ ವಂಚಕರ ಜಾಲ ದಿನದಿಂದ ದಿನಕ್ಕೆ ಭೀತಿ ಹುಟ್ಟಿಸುತ್ತಿದೆ. ಇಂಟರ್ನೆಟ್ ಜಗತ್ತಿನಲ್ಲಿ ನಡೆಯುತ್ತಿರುವ ಅಪರಾಧಗಳನ್ನು ತಡೆಯಲು ಸರ್ಕಾರ ಮತ್ತು ಗೃಹ ಇಲಾಖೆ ಎಷ್ಟೇ ಕಸರತ್ತು ನಡೆಸುತ್ತಿದ್ದರೂ, ವಂಚಕರ ಕೈ ಮೇಲಾಗುತ್ತಿರುವುದು ತೀವ್ರ ಆತಂಕ ಮೂಡಿಸಿದೆ. ಕೇವಲ ಕಳೆದ ಮೂರು ವರ್ಷಗಳ ಅವಧಿಯಲ್ಲೇ ರಾಜ್ಯದಲ್ಲಿ ಬರೋಬ್ಬರಿ 17,606 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿರುವುದು ತನಿಖಾ ಸಂಸ್ಥೆಗಳ ನಿದ್ದೆ ಗೆಡಿಸಿದೆ.
ಹಿಂದೆಲ್ಲಾ ಸೈಬರ್ ಕ್ರೈಂ ಠಾಣೆಗಳು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದವು. ರಾಜ್ಯದ ಯಾವುದೇ ಮೂಲೆಯಲ್ಲಿ ಆನ್‌ಲೈನ್ ವಂಚನೆ ನಡೆದರೂ ಜನರು ದೂರು ನೀಡಲು ರಾಜಧಾನಿಗೇ ಬರಬೇಕಾದ ಪರಿಸ್ಥಿತಿ ಇತ್ತು. ಆದರೆ ಈಗ ಕಾಲ ಬದಲಾಗಿದ್ದು, ರಾಜ್ಯಾದ್ಯಂತ 43 ಸೈಬರ್ ಪೊಲೀಸ್ ಠಾಣೆಗಳು ಕಾರ್ಯನಿರ್ವಹಿಸುತ್ತಿವೆ. ಆದಾಗ್ಯೂ, ತಾಂತ್ರಿಕ ವಂಚನೆಗಳ ಸಂಖ್ಯೆ ಮಾತ್ರ ಗಗನಕ್ಕೇರುತ್ತಲೇ ಇದೆ.
ಹಳ್ಳಿಗಳಿಗೂ ಹರಡಿದ ವಂಚನೆಯ ಜಾಲ!
ಈ ಹಿಂದೆ ಕೇವಲ ದೊಡ್ಡ ದೊಡ್ಡ ನಗರಗಳನ್ನಷ್ಟೇ ಟಾರ್ಗೆಟ್ ಮಾಡುತ್ತಿದ್ದ ಸೈಬರ್ ಖದೀಮರು, ಈಗ ಗ್ರಾಮೀಣ ಭಾಗಗಳಿಗೂ ತಮ್ಮ ಕರಳುಬಳ್ಳಿಯನ್ನು ಚಾಚಿದ್ದಾರೆ. ಹಳ್ಳಿಗಳ ಮುಗ್ಧ ಜನರನ್ನು ನಂಬಿಸಿ ಹಣ ಲೂಟಿ ಮಾಡುತ್ತಿದ್ದಾರೆ. ಇನ್ನು ಗ್ರಾಮೀಣ ಭಾಗದ ಜನರಿಗೆ ಈ ಬಗ್ಗೆ ಸೂಕ್ತ ಕಾನೂನು ಅರಿವು ಇಲ್ಲದಿರುವುದರಿಂದ ಹಾಗೂ ದೂರು ನೀಡುವ ಸರಿಯಾದ ಜ್ಞಾನವಿಲ್ಲದೆ ಎಷ್ಟೋ ಪ್ರಕರಣಗಳು ಬೆಳಕಿಗೇ ಬರುತ್ತಿಲ್ಲ ಎಂಬುದು ಕಹಿ ಸತ್ಯ.
ಪೊಲೀಸ್ ಇಲಾಖೆಗೆ ತಂತ್ರಜ್ಞಾನದ ಕೊರತೆ?
ಖದೀಮರು ಎಲ್ಲೋ ಒಂದು ಕಡೆ ಕುಳಿತು ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದ್ದಾರೆ. ಪೊಲೀಸರು ಇವರ ಬೆನ್ನತ್ತಿ ಹಿಡಿಯಲು ಶ್ರಮಿಸುತ್ತಿದ್ದರೂ, ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ತಕ್ಕಂತೆ ಅಪ್‌ಡೇಟ್ ಆಗಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ. ಸೈಬರ್ ಕ್ರೈಂ ಪತ್ತೆ ಹಚ್ಚಲು ಸುಧಾರಿತ ತಂತ್ರಜ್ಞಾನದ ಕೊರತೆ ಎದ್ದು ಕಾಣುತ್ತಿದ್ದು, ತಾಂತ್ರಿಕ ಪರಿಣಿತಿ ಹೊಂದಿರುವ ಪೊಲೀಸ್ ಅಧಿಕಾರಿಗಳ ಸಂಖ್ಯೆ ತೀರಾ ಕಡಿಮೆ ಇರುವುದು ತನಿಖೆಗೆ ಹಿನ್ನಡೆಯಾಗಿ ಪರಿಣಮಿಸಿದೆ.
ಸೈಬರ್ ಅಪರಾಧಗಳು ದಿಢೀರ್ ಹೆಚ್ಚಾಗಲು ಪ್ರಮುಖ ಕಾರಣಗಳೇನು?
ಡಿಜಿಟಲ್ ಪಾವತಿಗಳ ಅತಿಯಾದ ಬಳಕೆ: ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೇ ವಂಚಕರಿಗೆ ವರದಾನವಾಗಿದೆ.
ಅರಿವಿನ ಕೊರತೆ: ಸೈಬರ್ ವ್ಯವಹಾರಗಳು ಹಾಗೂ ಅವುಗಳಲ್ಲಿ ಅಡಗಿರುವ ಅಪಾಯಗಳ ಬಗ್ಗೆ ಜನಸಾಮಾನ್ಯರಲ್ಲಿ ಇಂದಿಗೂ ಪೂರ್ಣ ಪ್ರಮಾಣದ ಜಾಗೃತಿ ಇಲ್ಲದಿರುವುದು.
ಫೇಕ್ ಆ್ಯಪ್ ಹಾಗೂ ಲಿಂಕ್‌ಗಳ ಹಾವಳಿ: ನಕಲಿ ಆ್ಯಪ್‌ಗಳು ಹಾಗೂ ಆಕರ್ಷಕ ಕೊಡುಗೆಗಳ ಹೆಸರಿನಲ್ಲಿ ಬರುವ ‘ಫಿಶಿಂಗ್’ ಲಿಂಕ್‌ಗಳನ್ನು ಕ್ಲಿಕ್ ಮಾಡುವಂತೆ ಪ್ರಚೋದಿಸಿ ಕ್ಷಣಮಾತ್ರದಲ್ಲಿ ಬ್ಯಾಂಕ್ ಖಾತೆ ಖಾಲಿ ಮಾಡಲಾಗುತ್ತಿದೆ.
ಯುಪಿಐ/ಕ್ಯೂಆರ್ ಕೋಡ್ ಸ್ಕ್ಯಾಮ್: ಇತ್ತೀಚೆಗೆ ಕ್ಯೂಆರ್ ಕೋಡ್ ಹಾಗೂ ಯುಪಿಐ ಮೂಲಕವೇ ಅತಿ ಹೆಚ್ಚು ಜನರನ್ನು ಬುಕ್ ಮಾಡಲಾಗುತ್ತಿದೆ.
ಉದ್ಯೋಗದ ಹೆಸರಲ್ಲಿ ವಂಚನೆ: ಕೆಲಸದ ಹುಡುಕಾಟದಲ್ಲಿರುವ ನಿರುದ್ಯೋಗಿಗಳಿಗೆ ಆನ್‌ಲೈನ್ ಪಾರ್ಟ್-ಟೈಮ್ ಜಾಬ್ ಅಥವಾ ಕೈತುಂಬಾ ಸಂಬಳದ ಆಮಿಷ ಒಡ್ಡಿ ಲಕ್ಷ ಲಕ್ಷ ರೂ. ಲೂಟಿ ಹೊಡೆಯಲಾಗುತ್ತಿದೆ.
AI (ಕೃತಕ ಬುದ್ಧಿಮತ್ತೆ) ಬಳಕೆ: ಅತ್ಯಾಧುನಿಕ AI ತಂತ್ರಜ್ಞಾನವನ್ನು ದುರುಪಯೋಗಪಡಿಸಿಕೊಂಡು ಡಿಜಿಟಲ್ ವಂಚನೆ ಎಸಗಲಾಗುತ್ತಿದೆ.








