ಬೆಂಗಳೂರು: ರಾಜ್ಯ ರಾಜಕಾರಣದ ಹೈವೋಲ್ಟೇಜ್ ಸಸ್ಪೆನ್ಸ್‌ಗೆ ಕೊನೆಗೂ ತೆರೆ ಬಿದ್ದಿದೆ. ಮುಖ್ಯಮಂತ್ರಿ ಕುರ್ಚಿಯ ಮಹಾ ಯುದ್ಧದ ಕ್ಲೈಮ್ಯಾಕ್ಸ್ ಮುಗಿದು, ಸಿದ್ದರಾಮಯ್ಯ ರಾಜೀನಾಮೆ ನೀಡ ಬೆನ್ನಲ್ಲೇ ಹೊಸ ಇತಿಹಾಸ ಸೃಷ್ಟಿಗೆ ವೇದಿಕೆ ಸಿದ್ಧವಾಗಿದೆ. ಈ ನಡುವೆ, ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ಹಾಗೂ ರಾಜಗುರು ದ್ವಾರಕನಾಥ್ ಗುರೂಜಿ ಅವರು ನುಡಿದಿರುವ ಭವಿಷ್ಯ ಈಗ ಇಡೀ ರಾಜ್ಯದ ಗಮನ ಸೆಳೆದಿದೆ. ಡಿಕೆಶಿ ಜಾತಕದ ಪ್ರಕಾರ ಮುಂದಿನ ಎಂಟು ವರ್ಷಗಳ ಕಾಲ ಅವರ ಮುಖ್ಯಮಂತ್ರಿ ಗದ್ದುಗೆಯನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವೇ ಇಲ್ಲ ಎಂದು ಗುರೂಜಿ ಭಾರಿ ಭವಿಷ್ಯ ನುಡಿದಿದ್ದಾರೆ.
ಡಿ.ಕೆ. ಶಿವಕುಮಾರ್ ಅವರೊಂದಿಗೆ ತಮಗಿರುವ 35 ವರ್ಷಗಳ ಸುದೀರ್ಘ ಒಡನಾಟದ ಅಪರೂಪದ ರಹಸ್ಯವನ್ನು ಗುರೂಜಿ ಈ ವೇಳೆ ಬಿಚ್ಚಿಟ್ಟಿದ್ದಾರೆ. ಡಿಕೆಶಿಗೆ ಮುಖ್ಯಮಂತ್ರಿ ಪಟ್ಟ ಸಿಗುವುದು ಕೊಂಚ ತಡವಾಗುತ್ತಿದ್ದದ್ದನ್ನು ಕಂಡು, ನಾನು ಅವರಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲು ಶೃಂಗೇರಿಯ ಶಾರದಾಂಬೆ ಸನ್ನಿಧಿಗೆ ತೆರಳಿದ್ದೆ. ದೇವಿಯ ಮುಂದೆ ಕೈಮುಗಿದು ಪ್ರಾರ್ಥನೆ ಮಾಡುತ್ತಾ ಕುಳಿತಿದ್ದಾಗಲೇ ನನ್ನ ಮೊಬೈಲ್ ರಿಂಗ್ ಆಯಿತು. ಸ್ವತಃ ಡಿ.ಕೆ. ಶಿವಕುಮಾರ್ ಅವರೇ ಲೈನ್ ಗೆ ಬಂದು, ‘ಗುರೂಜಿ, ಕೆಲಸ ಮುಗಿಯಿತು, ಗುಡ್ ನ್ಯೂಸ್ ಎಂದರು. ತಾಯಿಯ ಸನ್ನಿಧಿಯಲ್ಲೇ ಈ ಶುಭ ಸಮಾಚಾರ ಸಿಕ್ಕಿದ್ದು ಪವಾಡದಂತಿತ್ತು” ಎಂದು ಗುರೂಜಿ ನೆನಪಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲ, ದಶಕಗಳ ಹಿಂದೆ ಎಸ್. ಬಂಗಾರಪ್ಪನವರ ಸಚಿವ ಸಂಪುಟದಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಜೈಲು ಮಂತ್ರಿಯಾಗಿದ್ದಾಗಲೇ, ‘ನೀನು ಮುಂದೊಂದು ದಿನ ಈ ರಾಜ್ಯದ ಮುಖ್ಯಮಂತ್ರಿ ಆಗುತ್ತೀಯಾ’ ಎಂದು ತಾವೇ ನುಡಿದಿದ್ದ ಹಳೇ ಭವಿಷ್ಯ ಇಂದು ನೂರಕ್ಕೆ ನೂರರಷ್ಟು ನಿಜವಾಗಿದೆ ಎಂದು ಅವರು ಹೆಮ್ಮೆಯಿಂದ ಹೇಳಿದ್ದಾರೆ.
ಸಿದ್ದರಾಮಯ್ಯ ರಾಜಯೋಗ ಮುಕ್ತಾಯ; ಡಿಕೆಶಿಗೆ ಹೆಗಲೇರಿದ ‘ಗುರು ಬಲ’
ರಾಜ್ಯದ ಇಬ್ಬರು ಘಟಾನುಘಟಿ ನಾಯಕರ ಜಾತಕದ ಗ್ರಹಗತಿಗಳನ್ನು ವಿಶ್ಲೇಷಿಸಿರುವ ದ್ವಾರಕನಾಥ್ ಗುರೂಜಿ, ಅಧಿಕಾರದ ಹಸ್ತಾಂತರದ ಹಿಂದಿರುವ ಜ್ಯೋತಿಷ್ಯ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ.
ಸಿದ್ದರಾಮಯ್ಯ ಜಾತಕ: “ಸಿದ್ದರಾಮಯ್ಯ ಅವರದ್ದು ವೃಶ್ಚಿಕ ರಾಶಿ. ಪ್ರಸ್ತುತ ಅವರಿಗೆ ಗುರು ಹಾಗೂ ಶನಿ ಇಬ್ಬರ ಬಲವೂ ಕೈಕೊಟ್ಟಿದೆ. ಹೀಗಾಗಿ ಅವರ ಸಿಎಂ ಆಗುವ ರಾಜಯೋಗ ಈಗ ಮುಗಿದಿದೆ. ಆದರೆ, ಹಿರಿಯ ನಾಯಕರಾಗಿ ರಾಜ್ಯಕ್ಕೆ ಅವರ ಮಾರ್ಗದರ್ಶನ ಸದಾ ಇರಲಿದೆ.”
ಡಿ.ಕೆ. ಶಿವಕುಮಾರ್ ಜಾತಕ: “ಇತ್ತ ಡಿಕೆಶಿಗೆ ಸುವರ್ಣ ಯುಗ ಆರಂಭವಾಗಿದೆ. ಗೋಚಾರ ಫಲದ ಪ್ರಕಾರ ಗುರು ಗ್ರಹವು ಈಗ ಮಿಥುನ ರಾಶಿಯಲ್ಲಿದ್ದಾನೆ. ಇದು ಶಿವಕುಮಾರ್ ಅವರಿಗೆ ಪ್ರಬಲ ರಾಜಯೋಗವನ್ನು ತಂದುಕೊಟ್ಟಿದೆ. ಇದರ ಪ್ರಭಾವ ಎಷ್ಟು ಶಕ್ತಿಯುತವಾಗಿದೆಯೆಂದರೆ, ಮುಂದಿನ 8 ವರ್ಷಗಳ ಕಾಲ ಅವರನ್ನು ಈ ಕುರ್ಚಿಯಿಂದ ಕೆಳಗಿಳಿಸಲು ಯಾರ ಕೈಯಲ್ಲೂ ಸಾಧ್ಯವಿಲ್ಲ.”
‘ಡಿಕೆಶಿ ಅಂದ್ರೆ ಬ್ರ್ಯಾಂಡ್’.. ಮುಂದಿದೆ ಬೆಂಗಳೂರು ಬದಲಾವಣೆಯ ಮಾಸ್ಟರ್ ಪ್ಲಾನ್!
“ಡಿ.ಕೆ. ಶಿವಕುಮಾರ್ ಅಂದರೆ ಕೇವಲ ಒಬ್ಬ ಸಿಎಂ ಮಾತ್ರವಲ್ಲ, ಅವರ ಹೆಸರೇ ಒಂದು ಬ್ರ್ಯಾಂಡ್” ಎಂದು ಕೊಂಡಾಡಿರುವ ಗುರೂಜಿ, ಡಿಕೆಶಿ ಅವರ ಆಡಳಿತ ವೈಖರಿ ಹೇಗಿರಲಿದೆ ಎಂಬುದನ್ನು ವಿವರಿಸಿದ್ದಾರೆ. ಅವರು ಅತ್ಯಂತ ಬುದ್ಧಿವಂತ ಹಾಗೂ ಅದ್ಭುತ ಸಂಯಮವುಳ್ಳ ನಾಯಕ. ಸಿದ್ದರಾಮಯ್ಯ ಅವರ ಬಣದವರನ್ನು ಕೂಡ ಪ್ರೀತಿಯಿಂದ ಜೊತೆಯಲ್ಲೇ ಕರೆದುಕೊಂಡು ಹೋಗಿ, ರಾಜ್ಯದಲ್ಲಿ ಒಂದು ಯಶಸ್ವಿ ಸರ್ಕಾರವನ್ನು ನಡೆಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಧಿಕಾರ ವಹಿಸಿಕೊಂಡ ತಕ್ಷಣವೇ ಬೆಂಗಳೂರಿನ ಮೂಲಸೌಕರ್ಯ, ಟ್ರಾಫಿಕ್ ಕಿರಿಕಿರಿ ಹಾಗೂ ಕುಡಿಯುವ ನೀರಿನ ಸಮಸ್ಯೆಯನ್ನು ಯುದ್ಧೋಪಾದಿಯಲ್ಲಿ ಬಗೆಹರಿಸಬೇಕು ಎಂಬ ಬಲವಾದ ಕನಸು ಮತ್ತು ಮಾಸ್ಟರ್ ಪ್ಲಾನ್ ಡಿಕೆಶಿ ಕಣ್ಣ ಮುಂದಿದೆ ಎಂದು ಗುರೂಜಿ ಹೇಳಿದ್ದಾರೆ.








