ನವದೆಹಲಿ: ದೇಶದ ರಾಜಧಾನಿ ದೆಹಲಿಯ ಹೌಜ್ ಖಾಸ್ ಪ್ರದೇಶದಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ಭಾರತೀಯ ಸ್ಪರ್ಧಾ ಆಯೋಗದ (CCI) ಮೊದಲ ಅಧ್ಯಕ್ಷ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಧನೇಂದ್ರ ಕುಮಾರ್ (80) ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಮೇ 27ರ ಬುಧವಾರ ತಡರಾತ್ರಿ ಅವರ ನಿವಾಸದಲ್ಲಿ ಏರ್ ಕಂಡೀಷನರ್ (AC) ಇನ್ಡೋರ್ ಯುನಿಟ್ ಸ್ಫೋಟಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಏಮ್ಸ್ (AIIMS) ಟ್ರಾಮಾ ಸೆಂಟರ್‌ಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಬುಧವಾರ ರಾತ್ರಿ ಸುಮಾರು 11:18 ರ ವೇಳೆಗೆ ಹೌಜ್ ಖಾಸ್ ಪೊಲೀಸ್ ಠಾಣೆಗೆ ಅಗ್ನಿ ಅವಘಡದ ಕುರಿತು ಕರೆ ಬಂದಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಅವಘಡದ ಸಮಯದಲ್ಲಿ ಮನೆಯಲ್ಲಿ ಧನೇಂದ್ರ ಕುಮಾರ್ ಅವರ ಕುಟುಂಬಸ್ಥರು ಮತ್ತು ಮನೆ ಕೆಲಸದವರು ಸೇರಿದಂತೆ ಒಟ್ಟು ಐದು ಜನರಿದ್ದರು. ತಕ್ಷಣವೇ ಇಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ದಟ್ಟವಾದ ಹೊಗೆಯನ್ನು ಉಸಿರಾಡಿದ ಕಾರಣ ಧನೇಂದ್ರ ಕುಮಾರ್ ಅವರು ಆಸ್ಪತ್ರೆಯಲ್ಲಿ ಮೃತಪಟ್ಟರೆ, ಅವರ ಮಗ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಎಸಿ ಇನ್ಡೋರ್ ಯುನಿಟ್‌ನಲ್ಲಿ ಉಂಟಾದ ಸ್ಫೋಟವೇ ಬೆಂಕಿಗೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ಯಾವುದೇ ರೀತಿಯ ಸಂಚು ಅಥವಾ ಅನುಮಾನಾಸ್ಪದ ಅಂಶಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಯಾರು ಈ ಧನೇಂದ್ರ ಕುಮಾರ್?
1946 ರಲ್ಲಿ ಜನಿಸಿದ ಧನೇಂದ್ರ ಕುಮಾರ್ ಅವರು 1968 ರ ಬ್ಯಾಚ್‌ನ ಹರಿಯಾಣ ಕೆಡರ್‌ನ ಐಎಎಸ್ ಅಧಿಕಾರಿಯಾಗಿದ್ದರು. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಕೇಂದ್ರ ಮತ್ತು ಹರಿಯಾಣ ಸರ್ಕಾರಗಳಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು.ಕೇಂದ್ರ ರಕ್ಷಣಾ ಸಚಿವಾಲಯ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಸಾಂಸ್ಕೃತಿಕ ಸಚಿವಾಲಯಗಳಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.ನವೆಂಬರ್ 2005 ರಿಂದ ಜನವರಿ 2009 ರವರೆಗೆ ವಿಶ್ವ ಬ್ಯಾಂಕ್‌ನಲ್ಲಿ ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭೂತಾನ್ ದೇಶಗಳ ಕಾರ್ಯನಿರ್ವಾಹಕ ನಿರ್ದೇಶಕರಾಗಿ (Executive Director) ಮಹತ್ವದ ಆರ್ಥಿಕ ಯೋಜನೆಗಳಲ್ಲಿ ಕೆಲಸ ಮಾಡಿದ್ದರು.
ಫೆಬ್ರವರಿ 2009 ರಲ್ಲಿ ಇವರನ್ನು ಭಾರತೀಯ ಸ್ಪರ್ಧಾ ಆಯೋಗದ (CCI) ಮೊದಲ ಚೇರ್ಮನ್ ಆಗಿ ನೇಮಿಸಲಾಯಿತು. ಜೂನ್ 2011 ರವರೆಗೆ ಇವರು ಈ ಹುದ್ದೆಯಲ್ಲಿದ್ದು, ಮಾರುಕಟ್ಟೆಯಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರಮುಖ ಕಾನೂನುಗಳನ್ನು ಜಾರಿಗೆ ತಂದಿದ್ದರು.








