ನವದೆಹಲಿ: ವಿವಾಹಿತ ಮಹಿಳೆಯೊಬ್ಬರು ತಮ್ಮ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವರದಕ್ಷಿಣೆಗಾಗಿ ನಡೆಯುವ ಕಿರುಕುಳದ ಘಟನೆಗಳನ್ನು ತೀವ್ರವಾಗಿ ಟೀಕಿಸಿದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಸಮಾಜಕ್ಕೆ ಕಠಿಣ ಸಂದೇಶ ರವಾನಿಸಬೇಕಾದ ಅಗತ್ಯವಿದೆ ಎಂದು ನ್ಯಾಯಾಲಯ ಒತ್ತಿಹೇಳಿದೆ.
ನ್ಯಾಯಮೂರ್ತಿ ಬಿ.ವಿ. ನಾಗರತ್ನ ಮತ್ತು ನ್ಯಾಯಮೂರ್ತಿ ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ಪ್ರಕರಣದ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ನ್ಯಾಯಮೂರ್ತಿ ನಾಗರತ್ನ ಅವರು, “ಹುಡುಗರು ಮದುವೆಯಾಗುವುದು ಏಕೆ? ಮತ್ತು ಮದುವೆಯ ನಂತರ ತಮ್ಮ ಪತ್ನಿಯರನ್ನು ಹಾಗೂ ಅವರ ಕುಟುಂಬವನ್ನು ಏಕೆ ಈ ರೀತಿ ಅವಮಾನಿಸುತ್ತಾರೆ?” ಎಂದು ಪ್ರಶ್ನಿಸಿದರು. ಅಲ್ಲದೆ, “ವಧುವನ್ನು ಹೀಗೆ ಅವಮಾನಿಸುವುದನ್ನು ಮುಂದುವರಿಸಲು ಬಿಡಬಾರದು ಎಂಬ ಸಂದೇಶ ಸ್ಪಷ್ಟವಾಗಿ ಹೋಗಬೇಕು” ಎಂದು ಅವರು ಹೇಳಿದರು. ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಪತಿಯ ಕುಟುಂಬದ ಸದಸ್ಯರಿಗೆ ಪರಿಹಾರ ನೀಡಲು ನ್ಯಾಯಪೀಠ ನಿರಾಕರಿಸಿತು.
ಛತ್ತೀಸ್‌ಗಢ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ಐಪಿಸಿ ಸೆಕ್ಷನ್ 304ಬಿ (ವರದಕ್ಷಿಣೆ ಸಾವು), 306 (ಆತ್ಮಹತ್ಯೆಗೆ ಪ್ರಚೋದನೆ) ಮತ್ತು 498ಎ (ಕ್ರೌರ್ಯ ಮತ್ತು ಕಿರುಕುಳ) ಅಡಿಯಲ್ಲಿನ ಅಪರಾಧಗಳನ್ನು ಕೋರ್ಟ್ ಖಚಿತಪಡಿಸಿದೆ.
2010ರಲ್ಲಿ ಛತ್ತೀಸ್‌ಗಢದಲ್ಲಿ ನಡೆದ ಘಟನೆ ಇದಾಗಿದೆ. ಮದುವೆಯಾದ ಮೂರೇ ವರ್ಷಗಳಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಮೃತ ಮಹಿಳೆಯ ಪತಿ ಮತ್ತು ಸಂಬಂಧಿಕರು ಹಣ ಮತ್ತು ಕಾರಿನ ಬೇಡಿಕೆ ಇಟ್ಟು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿತ್ತು.
ವಿಚಾರಣಾ ನ್ಯಾಯಾಲಯದ ಪ್ರಕಾರ, ಮದುವೆಯಾದ ಏಳು ವರ್ಷಗಳ ಒಳಗಾಗಿ ಮಹಿಳೆ ಅಸಹಜ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಇದು ವರದಕ್ಷಿಣೆ ಸಾವು ಎಂಬುದಕ್ಕೆ ಸಾಕ್ಷ್ಯಾಧಾರಗಳಿವೆ. ಮೃತಳ ಸಾವಿಗೆ ಕೆಲವೇ ಸಮಯದ ಮೊದಲು ಹಣಕ್ಕಾಗಿ ಬೇಡಿಕೆ ಇಡಲಾಗಿತ್ತು ಮತ್ತು ದೌರ್ಜನ್ಯ ನಡೆದಿತ್ತು ಎಂಬುದನ್ನು ವೈದ್ಯಕೀಯ ಮತ್ತು ಸಾಕ್ಷ್ಯಾಧಾರಗಳು ದೃಢಪಡಿಸಿವೆ.
ಮೃತಳ ಪತಿಯ ಕಿರಿಯ ಸಹೋದರ (ಮೈದುನ) ತನ್ನ ಶಿಕ್ಷೆಯನ್ನು ರದ್ದುಗೊಳಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ತನ್ನ ಕಕ್ಷಿದಾರನ ಮೇಲೆ ಕೇವಲ 498ಎ ಸೆಕ್ಷನ್ ಮಾತ್ರ ವಿಧಿಸಲಾಗಿದೆ ಎಂದು ವಕೀಲರು ವಾದಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿ ನಾಗರತ್ನ ಅವರು, “ಅದು ಕೇವಲ 498ಎ ಆಗಿದ್ದು, ಕೇವಲ ಮೂರು ವರ್ಷದ ಶಿಕ್ಷೆಯಾಗಿದೆ ಎಂದು ನೀವು ಸಂತೋಷಪಡಬೇಕು” ಎಂದು ತೀಕ್ಷ್ಣವಾಗಿ ಉತ್ತರಿಸಿದರು. ವೈವಾಹಿಕ ಜೀವನದಲ್ಲಿ ಹೆಣ್ಣುಮಕ್ಕಳು ಎದುರಿಸುತ್ತಿರುವ ಆರ್ಥಿಕ ಒತ್ತಡ ಮತ್ತು ಬಲವಂತದ ಕಿರುಕುಳದ ಸಮಸ್ಯೆಯನ್ನು ನ್ಯಾಯಪೀಠ ಈ ವೇಳೆ ಪ್ರಸ್ತಾಪಿಸಿತು.








