ಬೆಂಗಳೂರು: ತಂತ್ರಜ್ಞಾನ ಮತ್ತು ‘ಕೃತಕ ಬುದ್ಧಿಮತ್ತೆ’ (ಎಐ) ಬಳಕೆಯಲ್ಲಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗಿಂತಲೂ ವೇಗವಾಗಿ ಮುನ್ನುಗ್ಗುತ್ತಿದೆ. ‘ICRIER-ಪ್ರೊಸಸ್ ಸೆಂಟರ್’ ಬಿಡುಗಡೆ ಮಾಡಿರುವ ‘ಸ್ಟೇಟ್ ಆಫ್ ಇಂಡಿಯಾಸ್ ಡಿಜಿಟಲ್ ಎಕಾನಮಿ’ (ಸೈಡ್ 2026) ವರದಿಯು, ಭಾರತದ ಈ ಅದ್ಭುತ ಡಿಜಿಟಲ್ ಕ್ರಾಂತಿಯನ್ನು ಜಗತ್ತಿಗೆ ಪರಿಚಯಿಸಿದೆ.
ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಐದನೇ ಸ್ಥಾನ
ಜಾಗತಿಕ ಜಿಡಿಪಿಯಲ್ಲಿ ಶೇ. 96ರಷ್ಟು ಪಾಲು ಹೊಂದಿರುವ ವಿಶ್ವದ 71 ದೇಶಗಳ ಡಿಜಿಟಲ್ ಬೆಳವಣಿಗೆಯನ್ನು ಈ ವರದಿಯಲ್ಲಿ ಪರಾಮರ್ಶೆ ಮಾಡಲಾಗಿದೆ. 2025ರಲ್ಲಿ ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಎಂಟನೇ ಸ್ಥಾನದಲ್ಲಿದ್ದ ಭಾರತ, ಕೇವಲ ಒಂದೇ ವರ್ಷದಲ್ಲಿ ಭಾರಿ ಪ್ರಗತಿ ಸಾಧಿಸಿ ಇದೀಗ ಐದನೇ ಸ್ಥಾನಕ್ಕೆ ಜಿಗಿದಿದೆ. ಸಾಫ್ಟ್‌ವೇರ್, ಐಟಿ ಸೇವೆಗಳು ಮತ್ತು ಕ್ಲೌಡ್ ಸಿಸ್ಟಮ್‌ಗಳಂತಹ ಡಿಜಿಟಲ್ ಸೇವೆಗಳನ್ನು ರಫ್ತು ಮಾಡುವಲ್ಲಿ ಭಾರತವು ಮುಂಚೂಣಿಯಲ್ಲಿದ್ದು, ಇದರಿಂದ ಬರೋಬ್ಬರಿ 328 ಬಿಲಿಯನ್ ಡಾಲರ್ (ಸುಮಾರು 31 ಲಕ್ಷ ಕೋಟಿ ರೂ.) ಆದಾಯ ಗಳಿಸಿದೆ.
AI ರೇಸ್‌ನಲ್ಲಿ ಮುಂಚೂಣಿಯಲ್ಲಿದೆ ಭಾರತ!
ಕೃತಕ ಬುದ್ಧಿಮತ್ತೆ ಅಥವಾ ಎಐ ಬಳಕೆಯಲ್ಲಿ ಭಾರತವು ಜಗತ್ತಿನಲ್ಲೇ ನಾಲ್ಕನೇ ಸ್ಥಾನದಲ್ಲಿದೆ. ಕೇವಲ ಅಮೆರಿಕ, ಚೀನಾ ಮತ್ತು ಸಿಂಗಾಪುರ ಮಾತ್ರ ನಮಗಿಂತ ಮುಂದಿವೆ. ಜರ್ಮನಿ, ಫ್ರಾನ್ಸ್, ಜಪಾನ್, ಯುಕೆ ಮತ್ತು ಕೆನಡಾದಂತಹ ಬಲಿಷ್ಠ ದೇಶಗಳನ್ನೂ ಭಾರತ ಹಿಂದಿಕ್ಕಿರುವುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ಅಮೆರಿಕದ ನಂತರ ಜಗತ್ತಿನ ಅತಿ ಹೆಚ್ಚು ‘ಎಐ ಪ್ರತಿಭೆʼ ಇರುವುದೇ ಭಾರತದಲ್ಲಿ! ಪ್ರಪಂಚದಾದ್ಯಂತ ಇರುವ ಒಟ್ಟು ಎಐ ಬಳಕೆದಾರರಲ್ಲಿ ಶೇ. 72 ರಷ್ಟು ಜನರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿದ್ದಾರೆ. ಅದರಲ್ಲಿ ಭಾರತ ಮತ್ತು ಚೀನಾ ಪಾಲು ಬರೋಬ್ಬರಿ ಶೇ. 40 ರಷ್ಟಿದೆ.
ಈ ಬಗ್ಗೆ ಮತ್ತಷ್ಟು ಮಾಹಿತಿ ಹಂಚಿಕೊಂಡಿರುವ ICRIERನ ಅಧ್ಯಕ್ಷ ಪ್ರಮೋದ್ ಭಾಸಿನ್, “ಭಾರತವು ಅತ್ಯುತ್ತಮ ಇಂಟರ್‌ನೆಟ್ ಸಂಪರ್ಕ, ಉದ್ಯಮಶೀಲತೆ ಮತ್ತು ಡಿಜಿಟಲ್ ಮೂಲಸೌಕರ್ಯವನ್ನು ನಿರ್ಮಿಸಿದೆ. ಮುಂದಿನ ಹಂತದ ಬೆಳವಣಿಗೆಯು ನಾವು ಎಐ ಅನ್ನು ಎಷ್ಟು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತೇವೆ ಮತ್ತು ಸೈಬರ್ ಭದ್ರತೆಯನ್ನು ಹೇಗೆ ಕಾಪಾಡಿಕೊಳ್ಳುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿದೆ,” ಎಂದರು.
ಪ್ರೊಸಸ್ ಸಂಸ್ಥೆಯ ಗ್ರೂಪ್ ಕಾರ್ಪೊರೇಟ್ ಅಫೇರ್ಸ್ ಉಪಾಧ್ಯಕ್ಷ ಸೆಹ್ರಾಜ್ ಸಿಂಗ್ ಪ್ರತಿಕ್ರಿಯಿಸಿ, “ಭಾರತವು ಈಗ ಕೇವಲ ಒಂದು ದೊಡ್ಡ ಡಿಜಿಟಲ್ ಮಾರುಕಟ್ಟೆಯಾಗಿ ಉಳಿದಿಲ್ಲ, ಬದಲಾಗಿ ಜಗತ್ತಿನ ಅತ್ಯಂತ ಪ್ರಭಾವಶಾಲಿ ‘ಎಐ ಆರ್ಥಿಕತೆ’ಯಾಗಿ ಹೊರಹೊಮ್ಮುತ್ತಿದೆ. ನಾವೀನ್ಯತಾ ಪಾಲುದಾರನಾಗಿ ನಾವು ಭಾರತದ ಡಿಜಿಟಲ್ ಇಕೋಸಿಸ್ಟಮ್‌ಗೆ ಬೆಂಬಲ ನೀಡಲಿದ್ದೇವೆ,” ಎಂದು ಹೇಳಿದರು.
ಮುಂದಿರುವ ಸವಾಲುಗಳೇನು?
ಭಾರತವು ಎಐ ಬಳಕೆಯಲ್ಲಿ ವಿಶ್ವದ ಶೇ. 26ರಷ್ಟು ಪಾಲನ್ನು ಹೊಂದಿದ್ದರೂ, ಜಾಗತಿಕ ಮಟ್ಟದ ಖಾಸಗಿ ಎಐ ಹೂಡಿಕೆಯಲ್ಲಿ ಭಾರತದ ಪಾಲು ಕೇವಲ ಶೇ. 1 ರಷ್ಟಿದೆ. ನಮ್ಮಲ್ಲಿ ಪ್ರತಿಭೆಗಳಿದ್ದರೂ, ಅವರಿಗೆ ಬೇಕಾದ ದೊಡ್ಡ ಬಂಡವಾಳ ಮತ್ತು ಹೈ-ಟೆಕ್ ಇನ್ಫ್ರಾಸ್ಟ್ರಕ್ಚರ್ ಕೊರತೆ ಎದ್ದುಕಾಣುತ್ತಿದೆ.
ಇದಲ್ಲದೆ, ಡಿಜಿಟಲೈಸೇಶನ್ ವೇಗವಾಗಿ ಬೆಳೆದಂತೆ ಸೈಬರ್ ವಂಚನೆ ಮತ್ತು ಆನ್‌ಲೈನ್ ಹಣಕಾಸು ಅಪರಾಧಗಳು ಕೂಡ ಹೆಚ್ಚಾಗುತ್ತಿವೆ. ಭಾರತವು ಡಿಜಿಟಲ್ ಬೆಳವಣಿಗೆಯ ಜೊತೆಗೆ ಸೈಬರ್ ಭದ್ರತೆ ಮತ್ತು ಪರಿಸರ ಸಂರಕ್ಷಣೆಗೂ ಸಮಾನ ಒತ್ತು ನೀಡಬೇಕಿದೆ ಎಂದು ವರದಿ ಎಚ್ಚರಿಸಿದೆ.
ಏನಿದು ʼಸೈಡ್ʼ ವರದಿ?
ಸ್ಟೇಟ್ ಆಫ್ ಇಂಡಿಯಾಸ್ ಡಿಜಿಟಲ್ ಎಕಾನಮಿ (ಸೈಡ್) ಎಂಬುದು ವಿಶ್ವದ ಡಿಜಿಟಲ್ ಆರ್ಥಿಕತೆಯ ಕಾರ್ಯಕ್ಷಮತೆಯನ್ನು ಅಳೆಯುವ ವಾರ್ಷಿಕ ವರದಿಯಾಗಿದೆ. ಈ ವರ್ಷದ ವರದಿಯಲ್ಲಿ, ಸಂಪರ್ಕ, ಬಳಕೆ, ರಕ್ಷಣೆ ಮತ್ತು ನಾವೀನ್ಯತೆ ಎಂಬ ನಾಲ್ಕು ಆಧಾರಗಳ ಮೇಲೆ 71 ದೇಶಗಳ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲಾಗಿದೆ.








