ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಸಿಎಂ ಬದಲಾವಣೆ ಮತ್ತು ಶಾಸಕರ ಸಹಿ ಸಂಗ್ರಹದ ವದಂತಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಅವರು ತೆರೆ ಎಳೆದಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಶಾಸಕರು ಸಹಿ ಸಂಗ್ರಹಿಸುತ್ತಿದ್ದಾರೆ ಎಂಬುದೆಲ್ಲ ಕೇವಲ ಊಹಾಪೋಹ ಮತ್ತು ಸುಳ್ಳು ಸುದ್ದಿಯಾಗಿದೆ. ಹೈಕಮಾಂಡ್ ಮಟ್ಟದಲ್ಲಿ ನಡೆದಿರುವ ಒಪ್ಪಂದದ ಪ್ರಕಾರವೇ ಎಲ್ಲ ಪ್ರಕ್ರಿಯೆಗಳು ಶಾಂತಿಯುತವಾಗಿ ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ.
ದೆಹಲಿ ಮಟ್ಟದಲ್ಲಿ ಹೈಕಮಾಂಡ್ ನಾಯಕರು ತೆಗೆದುಕೊಂಡಿರುವ ನಿರ್ಧಾರದ ಬಗ್ಗೆ ಯಾರಿಗೂ ಮುಂಚಿತವಾಗಿ ಗೊತ್ತಿರಲಿಲ್ಲ. ಹೈಕಮಾಂಡ್ ಸೂಚನೆಯ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ನಿರ್ಧಾರವನ್ನು ಯಾರನ್ನೂ ಕೇಳಿ ತೆಗೆದುಕೊಂಡಿದ್ದಲ್ಲ, ಬದಲಿಗೆ ಪಕ್ಷದ ಒಪ್ಪಂದದ ಭಾಗವಾಗಿಯೇ ಎಲ್ಲವೂ ನಡೆದಿದೆ. ಸದ್ಯದಲ್ಲೇ ಡಿ.ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಳ್ಳಲು ಆಗಮಿಸುತ್ತಿದ್ದು, ರಾಜಕೀಯದಲ್ಲಿ ಇಂತಹ ಬದಲಾವಣೆಗಳು ಸಹಜ ಎಂದು ಅವರು ಹೇಳಿದರು.
ಇದೇ ವೇಳೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹೆಚ್ಚುವರಿ ಡಿಸಿಎಂ (ಉಪಮುಖ್ಯಮಂತ್ರಿ) ಹುದ್ದೆಗಳ ಸೃಷ್ಟಿಯ ಬಗ್ಗೆಯೂ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದರು. ಸದ್ಯದಲ್ಲೇ ಕರೆಯಲಾಗಿರುವ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯ ಬಳಿಕ ಡಿಸಿಎಂ ಹುದ್ದೆಗಳ ಕುರಿತು ಅಂತಿಮ ನಿರ್ಧಾರವಾಗಲಿದೆ. ರಾಜ್ಯದಲ್ಲಿ ಎಷ್ಟು ಜನ ಉಪಮುಖ್ಯಮಂತ್ರಿಗಳಾಗುತ್ತಾರೆ ಎಂಬುದು ಆ ಸಭೆಯ ನಂತರವೇ ತಿಳಿಯಲಿದೆ. ಹೆಚ್ಚುವರಿ ಡಿಸಿಎಂ ಹುದ್ದೆಗಳು ಸೃಷ್ಟಿಯಾಗಲೂಬಹುದು ಅಥವಾ ಆಗದೆಯೂ ಇರಬಹುದು ಎಂದು ಅವರು ಮಾರ್ಮಿಕವಾಗಿ ನುಡಿದರು.
ರಾಜಕೀಯ ನಾಯಕತ್ವದ ಬದಲಾವಣೆಯ ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕಿದೆ. ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು, ಇದೇ ವೇಳೆ ‘ಅಹಿಂದ’ ನಾಯಕತ್ವದ ಕುರಿತು ಪ್ರಮುಖ ಹೇಳಿಕೆ ನೀಡಿದರು. ನಾವು ಅಹಿಂದ ಸಮುದಾಯವನ್ನು ಮುನ್ನಡೆಸುತ್ತೇವೆ. ರಾಜ್ಯದಲ್ಲಿ ಹೊಸ ಅಹಿಂದ ನಾಯಕನ ಉದಯ ಆಗಬೇಕಿದೆ ಅಲ್ಲವೇ? ಅಹಿಂದ ಉತ್ತರಾಧಿಕಾರಿಯಾಗಿ ಯಾರಾದರೂ ಒಬ್ಬರು ಮುಂದೆ ಬರಬೇಕಲ್ಲವೇ ಎಂದು ಜಾರಕಿಹೊಳಿ ಪ್ರಶ್ನಿಸುವ ಮೂಲಕ ಭವಿಷ್ಯದ ನಾಯಕತ್ವದ ಸುಳಿವು ನೀಡಿದರು.







