ಚೆಮ್ಸ್‌ಫೋರ್ಡ್‌ನ ಕೌಂಟಿ ಗ್ರೌಂಡ್‌ನಲ್ಲಿ ಗುರುವಾರ (ಮೇ 28) ನಡೆದ ಇಂಗ್ಲೆಂಡ್ ವಿರುದ್ಧದ ನಾಲ್ಕು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಮೃತಿ ಮಂಧಾನ ಆಡುತ್ತಿದ್ದಾರೆ.
ಪಂದ್ಯದಲ್ಲಿ ಇನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನ, ಎದುರಿಸಿದ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದರು. ಇಂಗ್ಲೆಂಡ್‌ನ ವೇಗದ ಬೌಲರ್ ಲಾರೆನ್ ಬೆಲ್ ಅವರು ಮಂಧಾನ ಅವರ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು; ಚಾರ್ಲಿ ಡೀನ್ ಅವರು ಕ್ಯಾಚ್ ಪಡೆದರು.
ಈ ಮೊದಲ ಎಸೆತದ ಔಟ್‌ನೊಂದಿಗೆ ಮಂಧಾನ ದಾಖಲೆ ಪುಟ ಸೇರಿದ್ದಾರೆ. ಟಿ20ಐನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿಯಾಗಿರುವ ಸಾಂಗ್ಲಿಯ 29 ವರ್ಷದ ಸ್ಮೃತಿ ಮಂಧಾನ, ಪಂದ್ಯದ ಮೊದಲ ಎಸೆತದಲ್ಲೇ ಔಟ್ ಆದ ಮೊದಲ ಭಾರತೀಯ ಮಹಿಳಾ ಬ್ಯಾಟರ್ ಎಂಬ ಅನಗತ್ಯ ದಾಖಲೆಗೆ ಪಾತ್ರರಾದರು.
ಈ ಪಂದ್ಯದಲ್ಲಿನ ಶೂನ್ಯ (ಡಕ್) ಸ್ಮೃತಿ ಮಂಧಾನ ಅವರ ಟಿ20ಐ ವೃತ್ತಿಜೀವನದ 6ನೇ ಡಕ್ ಆಗಿದೆ. ಭಾರತದ ಮಹಿಳಾ ಟಿ20ಐನಲ್ಲಿ ಶಫಾಲಿ ವರ್ಮಾ ಮಾತ್ರ ಮಂಧಾನಗಿಂತ ಹೆಚ್ಚು ಬಾರಿ ಡಕ್ ಆಗಿದ್ದಾರೆ.








