ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಕ್ಷಣಕ್ಷಣಕ್ಕೂ ಕುತೂಹಲಕಾರಿ ಬೆಳವಣಿಗೆಗಳು ನಡೆಯುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ ಎಂದು ವರದಿಯಾಗಿದೆ. ಮೇ 28ರ ಗುರುವಾರ ಮಧ್ಯಾಹ್ನ 3 ಗಂಟೆಗೆ ಅವರು ರಾಜೀನಾಮೆ ನೀಡಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಸಿಎಂ ರಾಜೀನಾಮೆ ನೀಡುತ್ತಿದ್ದಂತೆಯೇ ಹಾಲಿ ಸಚಿವ ಸಂಪುಟವು ಸಂಪೂರ್ಣವಾಗಿ ವಿಸರ್ಜನೆಯಾಗಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸದ್ಯ ಸಂಪುಟದಲ್ಲಿರುವ ಎಲ್ಲಾ 31 ಸಚಿವರು ತಮ್ಮ ಸ್ಥಾನಗಳನ್ನು ಕಳೆದುಕೊಳ್ಳಲಿದ್ದಾರೆ. ಇದು ರಾಜ್ಯದಲ್ಲಿ ಹೊಸ ಸರ್ಕಾರ ಹಾಗೂ ಹೊಸ ಸಂಪುಟ ರಚನೆಗೆ ಹಾದಿ ಮಾಡಿಕೊಡಲಿದೆ.
ಸಿದ್ದರಾಮಯ್ಯ ಅವರ ನಿರ್ಗಮನದ ಬಳಿಕ ಮುಂದಿನ ಮುಖ್ಯಮಂತ್ರಿ ಯಾರು ಮತ್ತು ಹೊಸದಾಗಿ ರಚನೆಯಾಗಲಿರುವ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿದೆ ಎಂಬುದು ಸದ್ಯದ ದೊಡ್ಡ ಯಕ್ಷಪ್ರಶ್ನೆಯಾಗಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆಗಳ ನಡುವೆ, ಅವರ ನೇತೃತ್ವದ ಸಂಪುಟದಲ್ಲಿ ಸಿದ್ದರಾಮಯ್ಯ ಅವರ ಆಪ್ತರಾದ ಜಮೀರ್ ಅಹ್ಮದ್ ಖಾನ್ ಮತ್ತು ಎಂ.ಬಿ. ಪಾಟೀಲ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಮುಂದುವರಿಯುತ್ತಾರೆಯೇ ಅಥವಾ ಅವರಿಗೆ ಕೊಕ್ ನೀಡಲಾಗುತ್ತದೆಯೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆಮಾಡಿದೆ.
ಹೊಸದಾಗಿ ರಚನೆಯಾಗಲಿರುವ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಶುರುವಾಗಿದೆ. ಇದರ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಹಾಗೂ ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಹೊಸದಾಗಿ ರಚನೆಯಾಗುವ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ಸಿಗಲಿದೆಯೇ ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಈ ಬಾರಿ ಸಂಪುಟದಲ್ಲಿ ಸ್ಥಾನ ಪಡೆಯಲು ಹಿರಿಯ ಮತ್ತು ಯುವ ನಾಯಕರ ನಡುವೆ ಸಚಿವಾಕಾಂಕ್ಷಿಗಳ ಲಾಬಿ ಈಗಾಗಲೇ ಬಿರುಸಿನಿಂದ ಆರಂಭಗೊಂಡಿದೆ.
ಪ್ರಸ್ತುತ ಸಂಪುಟದಲ್ಲಿ ಮುಸ್ಲಿಂ ಸಮುದಾಯದಿಂದ ಜಮೀರ್ ಅಹಮದ್ ಖಾನ್ ಹಾಗೂ ರಹೀಂ ಖಾನ್ ಸಚಿವರಾಗಿದ್ದರೆ, ಯು.ಟಿ. ಖಾದರ್ ಅವರು ಸ್ಪೀಕರ್ ಆಗಿ ಮತ್ತು ಸಲೀಂ ಅಹಮದ್ ಅವರು ವಿಧಾನ ಪರಿಷತ್ ಮುಖ್ಯ ಸಚೇತಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಹೊಸ ಸಂಪುಟದಲ್ಲಿ ಮುಸ್ಲಿಂ ಸಮುದಾಯಕ್ಕೆ ಮತ್ತಷ್ಟು ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು ಎಂಬ ಬೇಡಿಕೆ ತೀವ್ರಗೊಂಡಿದೆ. ಹೊಸ ಮತ್ತು ಯುವ ನಾಯಕರಿಗೆ ಮಣೆ ಹಾಕುವ ನಿಟ್ಟಿನಲ್ಲಿ ಸಮುದಾಯದ ಒಳಗೂ ಭಾರಿ ಪೈಪೋಟಿ ಏರ್ಪಟ್ಟಿದೆ.
ತಮಿಳುನಾಡು ಮಾದರಿಯ ಯುವ ಸಂಪುಟಕ್ಕೆ ರಾಹುಲ್ ಗಾಂಧಿ ಒಲವು? ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ತಮಿಳುನಾಡು ಮಾದರಿಯಲ್ಲಿ ಹೆಚ್ಚು ಯುವಕರನ್ನು ಒಳಗೊಂಡ ಸಚಿವ ಸಂಪುಟವನ್ನು ಕರ್ನಾಟಕದಲ್ಲೂ ರಚಿಸಬೇಕು ಎಂಬ ಇಂಗಿತವಿದೆ ಎನ್ನಲಾಗಿದೆ. ಇತ್ತೀಚೆಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ, ಕೆಲವೇ ಕೆಲವು ಹಿರಿಯ ಸಚಿವರನ್ನು ಉಳಿಸಿಕೊಂಡು ಉಳಿದವರಿಗೆ ಕೊಕ್ ನೀಡಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಆದರೆ, ಹಿರಿಯರನ್ನು ಕೈಬಿಟ್ಟರೆ ಎದುರಾಗಬಹುದಾದ ರಾಜಕೀಯ ಪರಿಣಾಮಗಳ ಕುರಿತು ಸಿದ್ದರಾಮಯ್ಯ ಅವರು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದ್ದು, ಹೈಕಮಾಂಡ್ ಅಂತಿಮವಾಗಿ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದು ಕಾದುನೋಡಬೇಕಿದೆ.








