ಮೈಸೂರು: ಕೋಟಿಗಟ್ಟಲೆ ಮೌಲ್ಯದ ಆನೆದಂತವನ್ನು ಕಾನೂನುಬಾಹಿರವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಆಂಧ್ರಪ್ರದೇಶದ ನಿವೃತ್ತ ಮಹಿಳಾ ಪೊಲೀಸ್ ಅಧಿಕಾರಿ ಸೇರಿದಂತೆ ನಾಲ್ವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 3 ಕೆ.ಜಿ ತೂಕದ 3 ಆನೆದಂತದ ತುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಆರೋಪಿಗಳನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಮೈಸೂರು ಡಿಸಿಎಫ್ ಪರಮೇಶ್ ಅವರು ಮಾಹಿತಿ ನೀಡಿದ್ದಾರೆ.
ಬಂಧಿತ ಆರೋಪಿಗಳ ವಿವರ: ಅರಣ್ಯ ಇಲಾಖೆಯ ಬಲೆಗೆ ಬಿದ್ದವರನ್ನು ಆಂಧ್ರಪ್ರದೇಶದ ಕರ್ನೂಲ್ ನಿವಾಸಿ ಸೈಯ್ಯದ್ ಮಹಮದ್ ಫಯಾಜ್, ಕೊಳ್ಳೇಗಾಲದ ಮುನೀರ್ ಪಾಷ, ಕೊಳ್ಳೇಗಾಲದ ಅಪ್ಸರ್‌ಪಾಷ ಮತ್ತು ಮೈಸೂರಿನ ರಾಮಕೃಷ್ಣನಗರದ ನಿವಾಸಿ, ನಿವೃತ್ತ ಪೊಲೀಸ್ ಅಧಿಕಾರಿ ಜಮುನಾರಾಣಿ ಎಂದು ಗುರುತಿಸಲಾಗಿದೆ. ಮಹಾರಾಷ್ಟ್ರದ ನಾಗ್ಪುರದ ಡೈರೆಕ್ಟೊರೇಟ್ ಆಫ್ ರೆವಿನ್ಯೂ ಇಂಟಲಿಜೆನ್ಸ್ (ಡಿಆರ್‌ಐ) ಅಧಿಕಾರಿಗಳು ನೀಡಿದ ಖಚಿತ ಮಾಹಿತಿ ಮೇರೆಗೆ ಮೈಸೂರು ಪ್ರಾದೇಶಿಕ ವಿಭಾಗದ ಅರಣ್ಯ ಇಲಾಖೆಯ ಸಿಬ್ಬಂದಿ ಈ ಮಿಂಚಿನ ದಾಳಿ ನಡೆಸಿದ್ದಾರೆ.
ಕೋಟಿ ಮೌಲ್ಯದ ದಂತಕ್ಕೆ ಗ್ರಾಹಕರ ಹುಡುಕಾಟ: ಘಟನೆಯ ಹಿನ್ನೆಲೆಯನ್ನ ನೋಡುವುದಾದರೆ, ನಿವೃತ್ತ ಪೊಲೀಸ್ ಅಧಿಕಾರಿ ಜಮುನಾರಾಣಿ ತನ್ನ ಬಳಿ ಅಂದಾಜು 2 ಕೋಟಿ ರೂ. ಮೌಲ್ಯದ ಆನೆದಂತ ಇರುವುದಾಗಿ ಆಂಧ್ರದ ಕರ್ನೂಲ್ ನಿವಾಸಿ, ತನ್ನ ಪರಿಚಯಸ್ಥ ಸೈಯ್ಯದ್ ಮಹಮದ್ ಫಯಾಜ್‌ಗೆ ತಿಳಿಸಿ, ಇದನ್ನು ಮಾರಾಟ ಮಾಡಿಕೊಡುವಂತೆ ಕೋರಿದ್ದರು. ಈ ಹಿನ್ನೆಲೆಯಲ್ಲಿ ಫಯಾಜ್ ದಂತ ಖರೀದಿಸುವ ಗ್ರಾಹಕರಿಗಾಗಿ ಜಾಲ ಬೀಸಲಾರಂಭಿಸಿದ್ದನು. ಈ ರಹಸ್ಯ ದಂಧೆಯ ಸುಳಿವು ನಾಗ್ಪುರದ ರೆವಿನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಸಿಬ್ಬಂದಿಗೆ ಸಿಕ್ಕ ತಕ್ಷಣ, ಅವರು ಕಾರ್ಯಾಚರಣೆಗೆ ಸಜ್ಜಾಗಿದ್ದಾರೆ.
ಗ್ರಾಹಕರಂತೆ ನಟಿಸಿದ ಅಧಿಕಾರಿಗಳು, ಖೆಡ್ಡಾಕ್ಕೆ ಬಿದ್ದ ಆರೋಪಿಗಳು: ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಲು ಯೋಜನೆ ರೂಪಿಸಿದ ಡಿಆರ್‌ಐ ಅಧಿಕಾರಿಗಳು, ತಾವೇ ಆನೆದಂತ ಖರೀದಿಸುವ ಗ್ರಾಹಕರಂತೆ ನಟಿಸಿ ಸೈಯ್ಯದ್ ಮಹಮದ್ ಫಯಾಜ್‌ನನ್ನು ಸಂಪರ್ಕಿಸಿ ಆತನ ವಿಶ್ವಾಸ ಗಳಿಸಿದ್ದಾರೆ. ನಂತರ ಮಂಗಳವಾರ ಮೈಸೂರಿಗೆ ಆಗಮಿಸಿದ ಅಧಿಕಾರಿಗಳ ತಂಡ, ರಾಮಕೃಷ್ಣನಗರದಲ್ಲಿರುವ ಜಮುನಾರಾಣಿ ನಿವಾಸಕ್ಕೆ ತೆರಳಿ ದಂತ ಖರೀದಿಸುವ ನೆಪದಲ್ಲಿ ಮಾತುಕತೆ ನಡೆಸಿದೆ. ಅಲ್ಲಿರುವುದು ಅಸಲಿ ಆನೆದಂತವೇ ಎಂಬುದನ್ನು ಖಚಿತಪಡಿಸಿಕೊಂಡ ತಕ್ಷಣ, ಮೈಸೂರು ಪ್ರಾದೇಶಿಕ ವಲಯದ ಅರಣ್ಯಾಧಿಕಾರಿಗಳಿಗೆ ಸ್ಥಳಕ್ಕೆ ಬರುವಂತೆ ಸಿಗ್ನಲ್ ನೀಡಿದ್ದಾರೆ.
ಸ್ಥಳದಲ್ಲೇ ಬಂಧನ ಮತ್ತು ನ್ಯಾಯಾಂಗ ವಶ: ಮಾಹಿತಿ ಸಿಗುತ್ತಿದ್ದಂತೆ ಜಮುನಾರಾಣಿ ಮನೆಗೆ ಧಾವಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳದಲ್ಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ನಂತರ ಇವರ ನೀಡಿದ ಮಾಹಿತಿ ಮೇರೆಗೆ ಕೊಳ್ಳೇಗಾಲದಲ್ಲಿದ್ದ ಮತ್ತೊಬ್ಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಬಂಧಿತ ನಾಲ್ಕೂ ಜನ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಪ್ರಕರಣದ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.








