ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಸೃಷ್ಟಿಸುವಂತಹ ವಿದ್ಯಮಾನವೊಂದು ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಸರಿಯಾಗಿ ಅವರು ರಾಜಭವನಕ್ಕೆ ತೆರಳಿ, ರಾಜ್ಯಪಾಲರಿಗೆ ಅಧಿಕೃತವಾಗಿ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ. ಈ ದಿಢೀರ್ ಬೆಳವಣಿಗೆಯು ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಮಾತ್ರವಲ್ಲದೆ ಇಡೀ ರಾಜ್ಯ ರಾಜಕಾರಣದಲ್ಲಿ ತಲ್ಲಣ ಮೂಡಿಸಿದೆ.
ರಾಜೀನಾಮೆ ನೀಡುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಇಂದು ಬೆಳಿಗ್ಗೆ ಸಚಿವ ಸಂಪುಟದ ಎಲ್ಲಾ ಸಹೋದ್ಯೋಗಿಗಳಿಗೆ ವಿಶೇಷ ಉಪಹಾರಕೂಟವನ್ನು ಆಯೋಜಿಸಿದ್ದರು. ಅತ್ಯಂತ ಗಂಭೀರ ವಾತಾವರಣದಲ್ಲಿ ನಡೆದ ಈ ಸಭೆಯಲ್ಲಿ ಮುಖ್ಯಮಂತ್ರಿಗಳು ತಮ್ಮ ರಾಜೀನಾಮೆಯ ನಿರ್ಧಾರವನ್ನು ಸಚಿವರ ಮುಂದೆ ಪ್ರಕಟಿಸಿದರು. “ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ” ಎಂದು ಸಿದ್ದರಾಮಯ್ಯ ಘೋಷಿಸುತ್ತಿದ್ದಂತೆ ಸಭೆಯಲ್ಲಿದ್ದ ಸಚಿವರು ಒಂದು ಕ್ಷಣ ದಿಗ್ಭ್ರಮೆಗೊಂಡರು.
ಮುಖ್ಯಮಂತ್ರಿಗಳ ಈ ದಿಢೀರ್ ನಿರ್ಧಾರವನ್ನು ಕೇಳಿ ಸಭೆಯಲ್ಲಿದ್ದ ಸಚಿವರು ತೀವ್ರ ಭಾವುಕರಾದರು. ಸಭೆಯ ಬಳಿಕ ಕಾವೇರಿ ನಿವಾಸದಿಂದ ಹೊರಬಂದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಂತೂ ತಮ್ಮ ದುಃಖವನ್ನು ತಡೆಯಲಾರದೆ ಗಳಗಳನೆ ಕಣ್ಣೀರು ಹಾಕಿದರು. ಸಿದ್ದರಾಮಯ್ಯ ಅವರ ರಾಜೀನಾಮೆ ನಿರ್ಧಾರದಿಂದ ತೀವ್ರ ಆಘಾತಕ್ಕೊಳಗಾದ ಸಂತೋಷ್ ಲಾಡ್, ಮಾಧ್ಯಮಗಳ ಸಮ್ಮುಖದಲ್ಲೇ ಕಣ್ಣೀರು ಸುರಿಸಿದ ಪ್ರಸಂಗ ನೆರೆದಿದ್ದವರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿತು.








