ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದ ನಾಯಕತ್ವ ಬದಲಾವಣೆ ವಿಚಾರಕ್ಕೆ ಕೊನೆಗೂ ತೆರೆ ಬಿದ್ದಿದೆ. ತೀವ್ರ ಹಗ್ಗಜಗ್ಗಾಟ ಹಾಗೂ ಹೈಕಮಾಂಡ್ ಮಟ್ಟದ ಚರ್ಚೆಗಳ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಬೆಂಗಳೂರಿನ ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ಇಂದು ಬೆಳಿಗ್ಗೆ ಏರ್ಪಡಿಸಿದ್ದ ಸಚಿವರ ಉಪಹಾರಕೂಟ ಸಭೆಯಲ್ಲಿ ಅವರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.
ಸಭೆಯಲ್ಲಿ ಸಚಿವರಿಗೆ ತಮ್ಮ ನಿರ್ಧಾರವನ್ನು ತಿಳಿಸಿದ ಸಿದ್ದರಾಮಯ್ಯ ಅವರು, ಇಂದು ಮಧ್ಯಾಹ್ನವೇ ರಾಜ್ಯಪಾಲರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ರಾಜ್ಯಪಾಲರು ಲಭ್ಯವಿಲ್ಲದಿದ್ದರೆ, ಅವರ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಹಸ್ತಾಂತರಿಸಲು ನಿರ್ಧರಿಸಿದ್ದಾರೆ. “ಇಂದು ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರ ಕಾರ್ಯದರ್ಶಿಗೆ ನನ್ನ ರಾಜೀನಾಮೆ ಪತ್ರವನ್ನು ಸಲ್ಲಿಕೆ ಮಾಡಲಿದ್ದೇನೆ” ಎಂದು ಮುಖ್ಯಮಂತ್ರಿಗಳು ಖುದ್ದಾಗಿ ಘೋಷಣೆ ಮಾಡುವ ಮೂಲಕ ಎಲ್ಲಾ ಕಟ್ಟುಕಥೆಗಳಿಗೆ ಪೂರ್ಣವಿರಾಮ ಇಟ್ಟಿದ್ದಾರೆ.
ಮುಖ್ಯಮಂತ್ರಿಗಳ ರಾಜೀನಾಮೆ ಘೋಷಣೆ ಹೊರಬೀಳುತ್ತಿದ್ದಂತೆಯೇ, ರಾಜ್ಯದಲ್ಲಿ ಹೊಸ ಸರ್ಕಾರದ ಸಚಿವ ಸಂಪುಟ ರಚನೆಯ ಕಸರತ್ತು ತೆರೆಮರೆಯಲ್ಲಿ ಚುರುಕುಗೊಂಡಿದೆ. ಮುಂದಿನ ನಾಯಕತ್ವವನ್ನು ಗಮನದಲ್ಲಿಟ್ಟುಕೊಂಡು ಹೈಕಮಾಂಡ್ ಮಹತ್ವದ ಬದಲಾವಣೆಗೆ ಮುಂದಾಗಿದೆ ಎನ್ನಲಾಗುತ್ತಿದ್ದು, ಈ ಬಾರಿ ಹೊಸ ಸಂಪುಟಕ್ಕೆ ‘ವಯಸ್ಸಿನ ಮಾನದಂಡ’ ನಿಗದಿಪಡಿಸುವ ಸಾಧ್ಯತೆ ದಟ್ಟವಾಗಿದೆ. ಸದಾ ಹಿರಿಯರಿಗೇ ಮಣೆ ಹಾಕುವ ಸಂಪ್ರದಾಯಕ್ಕೆ ಬ್ರೇಕ್ ಹಾಕಿ, ಈ ಬಾರಿ ಯುವ ಮುಖಗಳಿಗೆ ಹೆಚ್ಚಿನ ಆದ್ಯತೆ ನೀಡಲು ಗಂಭೀರ ಚಿಂತನೆ ನಡೆದಿದೆ.
ವಿಶ್ವಾಸಾರ್ಹ ಮೂಲಗಳ ಪ್ರಕಾರ, ಭವಿಷ್ಯದ ದೃಷ್ಟಿಯಿಂದ ಪಕ್ಷದಲ್ಲಿ ಮುಂದಿನ ತಲೆಮಾರಿನ ನಾಯಕರನ್ನು ಬೆಳೆಸಲು ಕಾಂಗ್ರೆಸ್ ಮುಂದಾಗಿದೆ. ಹೀಗಾಗಿ 60 ವರ್ಷದ ಒಳಗಿನ ಯುವ ಹಾಗೂ ಉತ್ಸಾಹಿ ಶಾಸಕರಿಗೆ ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಲವು ತೋರಿದೆ. ಇದೇ ವೇಳೆ, ಈಗಾಗಲೇ ನಾಲ್ಕಕ್ಕೂ ಹೆಚ್ಚು ಬಾರಿ ಸಚಿವರಾಗಿ ಸೇವೆ ಸಲ್ಲಿಸಿರುವ ಹಿರಿಯ ನಾಯಕರಿಗೆ ಈ ಬಾರಿ ಸಂಪುಟದಿಂದ ಕೊಕ್ ನೀಡಿ, ಅವರಿಗೆ ಪಕ್ಷದ ಸಾಂಸ್ಥಿಕ ಜವಾಬ್ದಾರಿಗಳನ್ನು ವಹಿಸಲು ಚರ್ಚೆಗಳು ನಡೆಯುತ್ತಿವೆ.
ಹೊಸ ಸಂಪುಟ ರಚನೆಯಲ್ಲಿ ಕೇವಲ ವಯಸ್ಸು ಮಾತ್ರವಲ್ಲದೆ, ರಾಜ್ಯದ ಪ್ರಮುಖ ಸಮುದಾಯಗಳ ‘ಜಾತಿ ಸಮೀಕರಣ’ವನ್ನು ಸಮತೋಲನಗೊಳಿಸುವುದು ಹೈಕಮಾಂಡ್ಗೆ ದೊಡ್ಡ ಸವಾಲಾಗಿದೆ. ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಎಲ್ಲಾ ವಲಯ ಹಾಗೂ ಜಾತಿಗಳಿಗೆ ಸಮಾನ ಪ್ರಾತಿನಿಧ್ಯ ಸಿಗುವಂತೆ ಕಾಂಗ್ರೆಸ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಸಿದ್ದರಾಮಯ್ಯ ಅವರ ನಿರ್ಗಮನದ ಬೆನ್ನಲ್ಲೇ ರಾಜ್ಯದ ಮುಂದಿನ ಸಾರಥಿ ಯಾರು ಮತ್ತು ಹೊಸ ಸಂಪುಟದಲ್ಲಿ ಯಾರಿಗೆಲ್ಲಾ ಸ್ಥಾನ ಸಿಗಲಿದೆ ಎಂಬ ಕುತೂಹಲ ಈಗ ಇಡೀ ರಾಜ್ಯದಾದ್ಯಂತ ಮನೆಮಾಡಿದೆ.








