ವಾಷಿಂಗ್ಟನ್: ಬಾಹ್ಯಾಕಾಶ ಇತಿಹಾಸದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ನಾಸಾ (NASA) ಅನಾವರಣಗೊಳಿಸಿದೆ. ಚಂದ್ರನ ಮೇಲೆ ಶಾಶ್ವತ ನೆಲೆ ನಿರ್ಮಿಸಲು ನಾಸಾ ಯೋಜನೆ ರೂಪಿಸಿದ್ದು, ಇದಕ್ಕಾಗಿ ರೋಬೋಟಿಕ್ ಲ್ಯಾಂಡರ್‌ಗಳು, ಮೂನ್ ಬಗ್ಗಿಗಳು ಮತ್ತು ಡ್ರೋನ್‌ಗಳನ್ನು ಬಳಸಲಿದೆ. ನಂತರದ ಹಂತದಲ್ಲಿ ಮಾನವಸಹಿತ ನೌಕೆಗಳನ್ನು ಕಳುಹಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ನೂರಾರು ಚದರ ಮೈಲುಗಳಷ್ಟು ವಿಸ್ತಾರವಾದ ಶಾಶ್ವತ ನೆಲೆಯನ್ನು ನಿರ್ಮಿಸಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಯೋಜನೆ ಹಾಕಿಕೊಂಡಿದೆ. “ಈ ಉಪಕ್ರಮವು ಬಾಹ್ಯಾಕಾಶದಲ್ಲಿ ಅಮೆರಿಕದ ನಾಯಕತ್ವವನ್ನು ಭದ್ರಪಡಿಸುತ್ತದೆ, ವೈಜ್ಞಾನಿಕ ಆವಿಷ್ಕಾರಗಳಿಗೆ ದಾರಿ ಮಾಡಿಕೊಡುತ್ತದೆ ಮತ್ತು ಮಂಗಳ ಗ್ರಹಕ್ಕೆ ಮಾನವರನ್ನು ಕಳುಹಿಸಲು ಅಗತ್ಯವಾದ ತಂತ್ರಜ್ಞಾನ ಹಾಗೂ ಅನುಭವವನ್ನು ಒದಗಿಸುತ್ತದೆ” ಎಂದು ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ನಾಸಾ ತಿಳಿಸಿದೆ.
”ಚಂದ್ರನ ಮೇಲಿನ ಈ ನೆಲೆ, ಮತ್ತೊಂದು ಆಕಾಶಕಾಯದ ಮೇಲೆ ಮಾನವನ ಮೊದಲ ಔಟ್‌ಪೋಸ್ಟ್ (ನೆಲೆ) ಆಗಲಿದೆ” ಎಂದು ನಾಸಾ ಆಡಳಿತಾಧಿಕಾರಿ ಜೇರೆಡ್ ಐಸಾಕ್‌ಮನ್ ಹೇಳಿದ್ದಾರೆ.
ಚಂದ್ರನ ದಕ್ಷಿಣ ಧ್ರುವವು ಸೌರಮಂಡಲದ ಅತಿದೊಡ್ಡ ಮತ್ತು ಅತ್ಯಂತ ಹಳೆಯ ಇಂಪ್ಯಾಕ್ಟ್ ಬೇಸಿನ್ ಆದ ‘ಸೌತ್ ಪೋಲ್-ಐಟ್ಕೆನ್ ಬೇಸಿನ್’ ಅನ್ನು ಒಳಗೊಂಡಿದೆ. ಈ ಪ್ರದೇಶದಿಂದ ಸಂಗ್ರಹಿಸುವ ಮಾದರಿಗಳು ಚಂದ್ರನ ಆರಂಭಿಕ ಇತಿಹಾಸ, ಭೂಮಿ-ಚಂದ್ರ ವ್ಯವಸ್ಥೆ ಮತ್ತು ಸೌರಮಂಡಲದ ವಿಕಾಸದ ಬಗ್ಗೆ ಹೆಚ್ಚಿನ ಒಳನೋಟಗಳನ್ನು ನೀಡಬಲ್ಲವು.
ಈ ವರ್ಷದ ಕೊನೆಯಲ್ಲಿ ‘ಮೂನ್ ಬೇಸ್ I, II ಮತ್ತು III’ ಎಂಬ ಮೂರು ಮಾನವರಹಿತ ಚಂದ್ರಯಾನ ಕಾರ್ಯಾಚರಣೆಗಳನ್ನು ಕೈಗೊಳ್ಳಲು ನಾಸಾ ಸಿದ್ಧತೆ ನಡೆಸಿದೆ. ಈ ಯೋಜನೆಗಾಗಿ ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್ (Blue Origin), ಇಂಟ್ಯೂಟಿವ್ ಮಷಿನ್ಸ್ (Intuitive Machines) ಮತ್ತು ಆಸ್ಟ್ರೋಬೋಟಿಕ್‌ನಂತಹ ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆಸ್ಟ್ರೋಲ್ಯಾಬ್‌ಗೆ $219 ಮಿಲಿಯನ್ ಮತ್ತು ಲೂನಾರ್ ಔಟ್‌ಪೋಸ್ಟ್‌ಗೆ $220 ಮಿಲಿಯನ್ ಮೌಲ್ಯದ ಗುತ್ತಿಗೆಗಳನ್ನು ನೀಡಲಾಗಿದೆ.








