ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ತೀವ್ರ ರಾಜಕೀಯ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಹಸನ ಈಗ ಹೊಸ ತಿರುವು ಪಡೆದುಕೊಂಡಿದೆ. ಸಿಎಂ ಹುದ್ದೆಯಿಂದ ಕೆಳಗಿಳಿಯಲು ಸಿದ್ಧರಾಗಿರುವ ಸಿದ್ದರಾಮಯ್ಯ ಅವರು, ಹೈಕಮಾಂಡ್ ನಾಯಕರು ತಮಗೆ ನೀಡಿದ್ದ ಆಫರ್‌ಗಳನ್ನು ನಯವಾಗಿಯೇ ತಿರಸ್ಕರಿಸುವ ಮೂಲಕ ಅಚ್ಚರಿಯ ನಡೆ ಇಟ್ಟಿದ್ದಾರೆ. ದೆಹಲಿ ಮಟ್ಟದ ನಾಯಕರ ಲೆಕ್ಕಾಚಾರಗಳಿಗೆ ಎರಡು ಪ್ರಮುಖ ವಿಚಾರಗಳಲ್ಲಿ ಬಿಗ್ ಚೆಕ್‌ಮೇಟ್ ನೀಡುವ ಮೂಲಕ ತಮ್ಮದೇ ಆದ ರಾಜಕೀಯ ಪಟ್ಟು ಮುಂದುವರಿಸಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಒಬಿಸಿ (ಹಿಂದುಳಿದ ವರ್ಗಗಳ) ಪ್ರಭಾವಿ ನಾಯಕನ ಅವಶ್ಯಕತೆ ಇರುವುದನ್ನು ಮನಗಂಡಿದ್ದ ಕಾಂಗ್ರೆಸ್ ಹೈಕಮಾಂಡ್, ಸಿದ್ದರಾಮಯ್ಯ ಅವರನ್ನು ದೆಹಲಿ ರಾಜಕಾರಣಕ್ಕೆ ಮುನ್ನಡೆಸಲು ಪ್ಲಾನ್ ಮಾಡಿತ್ತು. ಸಿದ್ದರಾಮಯ್ಯನವರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸುವ ಹಾಗೂ ಕೇಂದ್ರ ಮಟ್ಟದಲ್ಲಿ ಪ್ರಮುಖ ಜವಾಬ್ದಾರಿ ನೀಡುವ ಆಫರ್ ಅನ್ನು ಹೈಕಮಾಂಡ್ ಮುಂದಿಟ್ಟಿತ್ತು. ಆದರೆ, ಈ ಪ್ರಸ್ತಾಪವನ್ನು ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ ಎನ್ನಲಾಗಿದೆ.
ಹೈಕಮಾಂಡ್ ನಾಯಕರ ನಿಲುವಿಗೆ ಸೆಡ್ಡು ಹೊಡೆದಿರುವ ಸಿದ್ದರಾಮಯ್ಯ, ತಮಗೆ ದೆಹಲಿ ರಾಜಕಾರಣದಲ್ಲಿ ಆಸಕ್ತಿ ಇಲ್ಲ ಎಂಬುದನ್ನು ಖಡಾಖಂಡಿತವಾಗಿ ಹೇಳಿದ್ದಾರೆ. ಒಂದು ವೇಳೆ ಪರಿಸ್ಥಿತಿ ಅನಿವಾರ್ಯವಾದರೆ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಎಲ್ಲಾ ರೀತಿಯ ಅಧಿಕಾರಗಳನ್ನೂ ತ್ಯಾಗ ಮಾಡಲು ತಾವೀಗ ಸಿದ್ಧರಾಗಿದ್ದಾರೆಯೇ ವಿನಃ, ರಾಜ್ಯ ರಾಜಕಾರಣವನ್ನು ಬಿಟ್ಟು ಕದಲುವುದಿಲ್ಲ ಎಂಬ ದೃಢ ನಿಲುವಿಗೆ ಅವರು ಬಂದಿದ್ದಾರೆ. ಇದು ಹೈಕಮಾಂಡ್ ನಾಯಕರಿಗೆ ಸಿದ್ದರಾಮಯ್ಯ ನೀಡಿದ ಮೊದಲ ಬಿಗ್ ಶಾಕ್ ಎನ್ನಬಹುದು.
ಇದೇ ವೇಳೆ ಮುಖ್ಯಮಂತ್ರಿಗಳು ಮತ್ತೊಂದು ಅಚ್ಚರಿಯ ಹೆಜ್ಜೆ ಇಡುವ ಮೂಲಕ ಎಲ್ಲರ ಹುಬ್ಬೇರಿಸಿದ್ದಾರೆ. ಸಾಮಾನ್ಯವಾಗಿ ರಾಜಕೀಯ ನಾಯಕರು ಅಧಿಕಾರದಿಂದ ಕೆಳಗಿಳಿಯುವಾಗ ತಮ್ಮ ಮಕ್ಕಳಿಗೆ ಅಥವಾ ಕುಟುಂಬದವರಿಗೆ ಅಧಿಕಾರ ಸಿಗುವಂತೆ ಹಠ ಹಿಡಿಯುವುದು ನಾವಿಲ್ಲಿಯವರೆಗೆ ಕಂಡಿರುವ ಸಂಪ್ರದಾಯ. ಆದರೆ ಸಿದ್ದರಾಮಯ್ಯ ಅವರು ಇದಕ್ಕೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ತಮ್ಮ ಪುತ್ರ, ವಿಧಾನ ಪರಿಷತ್ ಸದಸ್ಯರಾಗಿರುವ ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ಸಚಿವ ಸ್ಥಾನ ಸೇರಿದಂತೆ ಯಾವುದೇ ಅಧಿಕಾರ ಹಾಗೂ ಸ್ಥಾನಮಾನಗಳು ಬೇಡ ಎಂದು ಹಠ ಹಿಡಿದಿದ್ದಾರೆ.
ಪುತ್ರನಿಗೆ ಯಾವುದೇ ಅಧಿಕಾರ ಬೇಡ ಎಂದು ಹೇಳುವ ಮೂಲಕ, ಸಿದ್ದರಾಮಯ್ಯ ಅವರು ತಮ್ಮ ಮೇಲಿರುವ ವಂಶಪಾರಂಪರ್ಯ ರಾಜಕಾರಣ ಅಥವಾ ಕುಟುಂಬ ರಾಜಕಾರಣದ ಆರೋಪಗಳಿಗೆ ತಾವೇ ಮುಕ್ತಿ ಹಾಡಿದ್ದಾರೆ. ಅಲ್ಲದೆ, ಹೈಕಮಾಂಡ್ ಮುಂದೆ ಯಾವುದೇ ರೀತಿಯ ಸ್ವಾರ್ಥವಿಲ್ಲದೆ, ನೈತಿಕವಾಗಿ ತಾವು ಮೇಲುಗೈ ಸಾಧಿಸಲು ಈ ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರ ಈ ಎರಡು ಪ್ರಮುಖ ನಡೆಗಳು ಈಗ ಕಾಂಗ್ರೆಸ್ ಹೈಕಮಾಂಡ್ ನಾಯಕರನ್ನು ತೀವ್ರ ಗೊಂದಲ ಹಾಗೂ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.








