ವಾಷಿಂಗ್ಟನ್: ಅಮೆರಿಕದಲ್ಲಿ ನಡೆಯಲಿರುವ ಮಧ್ಯಂತರ ಚುನಾವಣೆಗಳ (Midterms) ಬಗ್ಗೆ ತಮಗೆ ಯಾವುದೇ ಕಾಳಜಿ ಇಲ್ಲ ಮತ್ತು ಇರಾನ್ನೊಂದಿಗಿನ ಒಪ್ಪಂದದ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಇರಾನ್ನೊಂದಿಗಿನ ಯುದ್ಧವನ್ನು ಕೊನೆಗೊಳಿಸುವ ಮತ್ತು ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವ ಕುರಿತಾದ ಮಾತುಕತೆಗಳ ಮಧ್ಯೆ, ಟ್ರಂಪ್ ಅವರು ಕಠಿಣ ನಿಲುವು ವ್ಯಕ್ತಪಡಿಸಿದ್ದಾರೆ. ಹಾರ್ಮುಜ್ ಜಲಸಂಧಿಯ ಮೇಲೆ ಯಾವುದೇ ದೇಶದ ನಿಯಂತ್ರಣ ಇರುವುದಿಲ್ಲ ಎಂದು ಅವರು ಪುನರುಚ್ಚರಿಸಿದ್ದಾರೆ.
ದೇಶದಲ್ಲಿ ಇಂಧನ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಉದ್ಭವಿಸಿರುವ ರಾಜಕೀಯ ಅಸಮಾಧಾನ ಅಥವಾ ಮಧ್ಯಂತರ ಚುನಾವಣೆಗಳ ಬಗ್ಗೆ ತಮಗೆ ಚಿಂತೆಯಿಲ್ಲ. ಅಮೆರಿಕನ್ನರಿಗೆ ಈ ಸಂಘರ್ಷದ ಉದ್ದೇಶ ಅರಿವಿದೆ ಎಂದು ಟ್ರಂಪ್ ಹೇಳಿದ್ದಾರೆ.
“ಹಾರ್ಮುಜ್ ಜಲಸಂಧಿಯು ಅಂತರರಾಷ್ಟ್ರೀಯ ಜಲಪ್ರದೇಶವಾಗಿದೆ. ಅದನ್ನು ಯಾರೂ ನಿಯಂತ್ರಿಸುವುದಿಲ್ಲ, ಅದು ಎಲ್ಲರಿಗೂ ಮುಕ್ತವಾಗಿರುತ್ತದೆ” ಎಂದು ಟ್ರಂಪ್ ಖಡಕ್ಕಾಗಿ ತಿಳಿಸಿದ್ದಾರೆ. ಒಮಾನ್ನಂತಹ ದೇಶಗಳು ಸಹ ಈ ನಿಯಮವನ್ನು ಪಾಲಿಸಬೇಕು, ಇಲ್ಲವಾದಲ್ಲಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.
ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಅಸ್ತ್ರಗಳನ್ನು ಹೊಂದಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಅಮೆರಿಕ ಯಾವುದೇ ಸಂಧಾನ ಮಾಡಿಕೊಳ್ಳುವುದಿಲ್ಲ. ಇರಾನ್ ತನ್ನಲ್ಲಿರುವ ಹೆಚ್ಚಿನ ಸಾಂದ್ರತೆಯ ಯುರೇನಿಯಂ ಅನ್ನು ಅಮೆರಿಕಕ್ಕೆ ಹಸ್ತಾಂತರಿಸಬೇಕು ಅಥವಾ ಅಂತರರಾಷ್ಟ್ರೀಯ ಮೇಲ್ವಿಚಾರಣೆಯಲ್ಲಿ ನಾಶಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇರಾನ್ನ ಮೇಲಿರುವ ಆರ್ಥಿಕ ನಿರ್ಬಂಧಗಳನ್ನು ಸಡಿಲಿಸುವ ಅಥವಾ ವಿದೇಶಗಳಲ್ಲಿ ಸ್ಥಗಿತಗೊಂಡಿರುವ ಇರಾನ್ನ ಹಣವನ್ನು ಬಿಡುಗಡೆ ಮಾಡುವ ಯಾವುದೇ ಚರ್ಚೆಗಳು ಸದ್ಯ ನಡೆಯುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.








