ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಎನ್ನುವಂತೆ ಸಾಗರ ತಾಲ್ಲೂಕಿಗೆ ನೂತನ ತಹಶೀಲ್ದಾರ್ ಆಗಿ ಡಾ.ಪ್ರತಿಭಾ.ಆರ್ ಅವರನ್ನು ನೇಮಿಸಿ ಅಧಿಕೃತ ಆದೇಶ ಹೊರಡಿಸಿದೆ.
ಕರ್ನಾಟಕ ಸರ್ಕಾರವು ಕಂದಾಯ ಇಲಾಖೆಯಲ್ಲಿ ಮಹತ್ತರ ಆಡಳಿತಾತ್ಮಕ ಬದಲಾವಣೆ ಮಾಡಿದೆ. ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯದ ಒಟ್ಟು 27 ತಹಶೀಲ್ದಾರ್ (ಗ್ರೇಡ್-1 ಮತ್ತು ಗ್ರೇಡ್-2) ವೃಂದದ ಅಧಿಕಾರಿಗಳನ್ನು ವರ್ಗಾವಣೆ ಹಾಗೂ ಸ್ಥಳನಿಯುಕ್ತಿಗೊಳಿಸಿ ಸರ್ಕಾರ ಬುಧವಾರ (ಮೇ 27, 2026) ಅಧಿಕೃತ ಅಧಿಸೂಚನೆ ಹೊರಡಿಸಿದೆ.
ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಜಿ.ಕೆ. ನರಸಿಂಹಮೂರ್ತಿ ಅವರ ಡಿಜಿಟಲ್ ಸಹಿಯೊಂದಿಗೆ ಈ ಆದೇಶ ಹೊರಬಿದ್ದಿದ್ದು, ವರ್ಗಾವಣೆಗೊಂಡ ಎಲ್ಲಾ ಅಧಿಕಾರಿಗಳು ತಕ್ಷಣವೇ ನಿಯೋಜಿತ ಸ್ಥಳಗಳಲ್ಲಿ ಅಧಿಕಾರ ವಹಿಸಿಕೊಂಡು, ಸಿಟಿಸಿ ವರದಿಯನ್ನು ಇ-ಮೇಲ್ ಮೂಲಕ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಲಾಗಿದೆ.
ಇನ್ನೂ ಬೆಂಗಳೂರು ದಕ್ಷಿಣ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿಯ ಸಹಾಯಕರಾಗಿದ್ದಂತ ಡಾ.ಪ್ರತಿಭಾ.ಆರ್ ಅವರನ್ನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕು ಗ್ರೇಡ್-1 ತಹಶೀಲ್ದಾರ್ ಆಗಿ ಖಾಲಿ ಹುದ್ದೆಗೆ ನೇಮಕ ಮಾಡಿ ಸರ್ಕಾರ ಆದೇಶಿಸಿದೆ.
ಶಿವಮೊಗ್ಗ ಜಿಲ್ಲೆಯ ತಾಳಿಕೋಟೆ ತಾಲ್ಲೂಕು ತಹಶೀಲ್ದಾರ್ ಗ್ರೇಡ್-2 ಆಗಿದ್ದಂತ ಪ್ರದೀಪ್ ದೇವಗಿರಿ ಅವರನ್ನು ಭದ್ರಾವತಿ ತಾಲ್ಲೂಕಿನ ತಹಶೀಲ್ದಾರ್ ಗ್ರೇಡ್-1 ಆಗಿ ನೇಮಕ ಮಾಡಲಾಗಿದೆ. ಈ ಹುದ್ದೆಯಲ್ಲಿದ್ದಂತ ಪರಸಪ್ಪ ಕುರಬರ ಅವರನ್ನು ವರ್ಗಾವಣೆ ಮಾಡಲಾಗಿದೆ.
ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…









