ಬೆಂಗಳೂರು: ನಮ್ಮ ಮೆಟ್ರೋ ನೆರಳೆ ಮಾರ್ಗದ (Purple Line) ಐಟಿಪಿಎಲ್ ಮತ್ತು ಸತ್ಯಸಾಯಿ ಆಸ್ಪತ್ರೆ ಮೆಟ್ರೋ ನಿಲ್ದಾಣಗಳ ನಡುವೆ ರೈಲ್ವೆ ಹಳಿಗಳ ಮೇಲೆ ಮರದ ಕೊಂಬೆಯೊಂದು ಬಿದ್ದಿರುವ ಕಾರಣ, ವೈಟ್‌ಫೀಲ್ಡ್‌ನಿಂದ ಗರುಡಾಚಾರ್ ಪಾಳ್ಯದ ನಡುವಿನ ರೈಲು ಸಂಚಾರವನ್ನು ಇಂದು ಸಂಜೆ 06:00 ಗಂಟೆಯಿಂದ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಪ್ರಸ್ತುತ ಗರುಡಾಚಾರ್ ಪಾಳ್ಯ ಮತ್ತು ಚಲ್ಲಘಟ್ಟ ಮೆಟ್ರೋ ನಿಲ್ದಾಣಗಳ ನಡುವೆ ಎಂದಿನಂತೆ ಮೆಟ್ರೋ ರೈಲುಗಳು ಸಂಚರಿಸುತ್ತಿವೆ. ಬಿಎಂಆರ್‌ಸಿಎಲ್ (BMRCL) ಸಿಬ್ಬಂದಿ ಈಗಾಗಲೇ ಸ್ಥಳಕ್ಕೆ ಧಾವಿಸಿದ್ದು, ಹಳಿಯ ಮೇಲಿರುವ ಮರದ ಕೊಂಬೆಯನ್ನು ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಇನ್ನೇನು ಕೆಲವೇ ಸಮಯದಲ್ಲಿ ಪರಿಸ್ಥಿತಿ ತಿಳಿಯಾಗಲಿದ್ದು, ಶೀಘ್ರದಲ್ಲೇ ಎಂದಿನಂತೆ ಪೂರ್ಣ ಪ್ರಮಾಣದ ರೈಲು ಸೇವೆಗಳು ಪುನಾರಂಭಗೊಳ್ಳಲಿವೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ಸಹಕರಿಸಲು ಕೋರಲಾಗಿದೆ.







