ದಕ್ಷಿಣ ಕನ್ನಡ : ಮುಂಬರುವ ರಾಜ್ಯಸಭಾ ಚುನಾವಣೆಯ ಬಗ್ಗೆ ವರಿಷ್ಠರೊಂದಿಗೆ ಚರ್ಚಿಸಲು ಮುಖ್ಯಮಂತ್ರಿಗಳು ಮತ್ತು ನಾಯಕರು ದೆಹಲಿಗೆ ತೆರಳಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಕುಕ್ಕೆ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಮುಖ್ಯಮಂತ್ರಿಗಳ ಪರಮಾಧಿಕಾರವಾಗಿದ್ದು, ಊಹಾತ್ಮಕ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ ಎಂದರು.
ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರಲು ಇರುವ ನಾಲ್ಕೂ ಪ್ರವೇಶ ರಸ್ತೆಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ತಪಾಸಣೆಗಾಗಿ ಚೆಕ್ ಪೋಸ್ಟ್ ಸ್ಥಾಪಿಸಲು ಆದೇಶ ನೀಡಿರುವುದಾಗಿ ಇದೇ ವೇಳೆ ಸಚಿವರು ತಿಳಿಸಿದರು. ತಾವು ಇಂದು ದೇವಾಲಯಕ್ಕೆ ಬರುವಾಗ ರಸ್ತೆಯ ಬದಿಯಲ್ಲಿ ಪ್ಲಾಸ್ಟಿಕ್ ಬಾಟಲಿ, ತಟ್ಟೆ ಇತ್ಯಾದಿ ಬಿದ್ದಿರುವುದನ್ನು ನೋಡಿ ಆತಂಕವಾಯಿತು. ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಚೆಕ್ ಪೋಸ್ಟ್ ಸ್ಥಾಪಿಸಿ 2 ಹಂತದ ತಪಾಸಣೆ ಮಾಡಲು ಸೂಚಿಸಿರುವುದಾಗಿ ಹೇಳಿದರು.
ರಾಜ್ಯದಲ್ಲಿ ಡೀಮ್ಡ್ ಅರಣ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದೆ. ಬಿಜೆಪಿ ಅಧಿಕಾರಾವಧಿಯಲ್ಲಿ 2022ರಲ್ಲಿ ಸುಪ್ರೀಂಕೋರ್ಟ್ಗೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ 3.33 ಲಕ್ಷ ಹೆಕ್ಟೇರ್ ಭೂಮಿ ಡೀಮ್ಡ್ ಎಂದು ಉಲ್ಲೇಖಿಸಲಾಗಿದೆ. ಆದರೆ ಇದರಲ್ಲೂ ಅಂಗನವಾಡಿ, ಸರ್ಕಾರಿ ಆಸ್ಪತ್ರೆ, ಪಟ್ಟಾ ಭೂಮಿ ಇದ್ದು, ಈ ಸಮಸ್ಯೆ ಪರಿಹರಿಸಲು ಕಂದಾಯ ಇಲಾಖೆ ಜೊತೆಯಲ್ಲಿ ಜಂಟಿ ಸರ್ವೆ ನಡೆಸುತ್ತಿರುವುದಾಗಿ ಅವರು ಮಾಹಿತಿ ನೀಡಿದರು.
ಕಂದಾಯ ಇಲಾಖೆಯಲ್ಲಿ ಮೋಜಿಣಿದಾರರು ಕೆಲ ತಿಂಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಜೊತೆಗೆ ಸರ್ವೆಯರ್ಗಳ ಕೊರತೆ ಇರುವುದಾಗಿ ಉಡುಪಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅರಣ್ಯ ಜಂಟಿ ಸರ್ವೆಗಾಗಿಯೇ ವಿಶೇಷವಾಗಿ ಸಿಬ್ಬಂದಿ ನಿಯೋಜಿಸಲು ತಿಳಿಸಿದ್ದು, ಈ ಬಗ್ಗೆ ಕಂದಾಯ ಸಚಿವರೊಂದಿಗೆ ಸಮಾಲೋಚಿಸುವುದಾಗಿ ತಿಳಿಸಿದರು.








