ಬೆಂಗಳೂರು :ರೈತರಿಗೆ ಕೇಂದ್ರ ಸರ್ಕಾರವು ಸಿಹಿಸುದ್ದಿಯೊಂದನ್ನು ನೀಡಿದ್ದು, ರೈತರು ಇನ್ನು ಮುಂದೆ ಮನೆಯಿಂದಲೇ ತಮಗೆ ಅಗತ್ಯವಿರುವ ರಸಗೊಬ್ಬರವನ್ನು ಖರೀದಿಸಲು ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಹೊಸದೊಂದು ವ್ಯವಸ್ಥೆಯನ್ನು ಜಾರಿಗೆ ತಂದಿದೆ. ‘ಫರ್ಟಿಲೈಸರ್ಸ್ ಸೇಲ್ಸ್ ಅಪ್ಲಿಕೇಷನ್ ಸಿಸ್ಟಮ್’ (FSAS) ಅಡಿಯಲ್ಲಿ ‘ಫರ್ಟಿಲೈಸರ್ ಬುಕಿಂಗ್ ಆಪ್ ಫಾರ್ ಫಾರ್ಮರ್ಸ್’ (FBF) ಎಂಬ ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಲಾಗಿದೆ.
ಈ ಯೋಜನೆಯನ್ನು ದೇಶದ ಎಲ್ಲಾ ರಾಜ್ಯಗಳ ಆಯ್ದ ಎರಡು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಮುಂಗಾರು ಹಂಗಾಮಿನಲ್ಲಿ ಜಾರಿಗೊಳಿಸಲಾಗುತ್ತಿದ್ದು, ನಮ್ಮ ರಾಜ್ಯದಲ್ಲಿ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳನ್ನು ಈ ಪ್ರಾಯೋಗಿಕ ಜಾರಿಗೆ ಆಯ್ಕೆ ಮಾಡಿಕೊಳ್ಳಲಾಗಿದೆ.
ಹೇಗೆ ಕೆಲಸ ಮಾಡುತ್ತದೆ ಈ ಆಪ್?
ಎಲ್ಪಿಜಿ ಅಡುಗೆ ಅನಿಲ (Gas) ಬುಕ್ ಮಾಡುವ ಮಾದರಿಯಲ್ಲೇ ಈ ಆಪ್ ಮೂಲಕ ಗೊಬ್ಬರವನ್ನು ಬುಕ್ ಮಾಡಬಹುದು.
ರೈತರು ತಮ್ಮ ಆಂಡ್ರಾಯ್ಡ್ ಫೋನ್ನಲ್ಲಿ ಈ ಆಪ್ ಡೌನ್ಲೋಡ್ ಮಾಡಿಕೊಂಡು, ಅದರಲ್ಲಿ ಆಧಾರ್ ಸಂಖ್ಯೆ ನಮೂದಿಸಿದರೆ ಎಫ್ಐಡಿ, ಹಿಡುವಳಿ ವಿಸ್ತೀರ್ಣ ಇತ್ಯಾದಿ ಮಾಹಿತಿ ಲಭ್ಯವಾಗುತ್ತದೆ.
ಮೊಬೈಲ್ಗೆ ಒಟಿಪಿ (OTP) ಬಂದ ಬಳಿಕ 2 ರಿಂದ 3 ದಿನಗಳ ಅವಧಿಯೊಳಗೆ ಗೊಬ್ಬರ ಖರೀದಿಸಲು ಸಮಯವಿರುತ್ತದೆ.
ಬುಕ್ಕಿಂಗ್ ನಂತರ ಮೊಬೈಲ್ಗೆ ಬರುವ ಕ್ಯೂಆರ್ ಕೋಡ್ (QR Code) ಅನ್ನು ಗೊಬ್ಬರದ ಅಂಗಡಿ ಮಾಲೀಕರು ಸ್ಕ್ಯಾನ್ ಮಾಡಿ ಗೊಬ್ಬರ ನೀಡುತ್ತಾರೆ.
ಒಂದು ವೇಳೆ ರೈತರಿಗೆ ಖುದ್ದಾಗಿ ಅಂಗಡಿಗೆ ಹೋಗಲು ಸಾಧ್ಯವಾಗದಿದ್ದರೆ ಬೇರೆಯವರಿಗೆ ಅಥರೈಸೇಷನ್ (Authorization) ನೀಡಬಹುದು. ರೈತರ ಪರವಾಗಿ ಹೋಗುವ ವ್ಯಕ್ತಿ ಒಟಿಪಿ, ಕ್ಯೂಆರ್ ಕೋಡ್ ಹಾಗೂ ರೈತರ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗಬೇಕಾಗುತ್ತದೆ. ಹಣವನ್ನು ಯುಪಿಐ (UPI) ಮೂಲಕ ಪಾವತಿಸಲು ಸಹ ಅವಕಾಶವಿದೆ.
ದೇವರ ಜಮೀನು, ಬಗರ್ ಹುಕುಂ ಸಾಗುವಳಿದಾರರು ಮುಂತಾದ ರೈತರಿಗೂ ಈ ಆಪ್ ಮೂಲಕ ಖರೀದಿಸಲು ಅನುಕೂಲವಿದೆ.
ರೈತರಿಗೆ ಆಗುವ ಪ್ರಮುಖ ಅನುಕೂಲಗಳು:
ಗೊಬ್ಬರ ಸಿಗುತ್ತದೋ ಇಲ್ಲವೋ ಎಂಬ ಆತಂಕದಿಂದ ಪದೇ ಪದೇ ಅಂಗಡಿಗೆ ಅಲೆಯುವುದು ತಪ್ಪುತ್ತದೆ.
ಒಮ್ಮೆ ಬುಕಿಂಗ್ ಮಾಡಿದರೆ ಗೊಬ್ಬರ ರಿಸರ್ವ್ ಆಗಿ ಇರುತ್ತದೆ.
ಆಧಾರ್ ಆಧಾರಿತ ಕೋಟಾ ಇರುವುದರಿಂದ ಅರ್ಹ ರೈತರ ಗೊಬ್ಬರ ಬೇರೆಯವರ ಪಾಲಾಗುವುದು ತಪ್ಪುತ್ತದೆ.








