ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಾದ ‘ಗೃಹಜ್ಯೋತಿ’ (ಉಚಿತ ವಿದ್ಯುತ್) ಮತ್ತು ‘ಗೃಹಲಕ್ಷ್ಮಿ’ (ತಿಂಗಳಿಗೆ ₹2000) ಯೋಜನೆಗಳ ದುರುಪಯೋಗಕ್ಕೆ ಬ್ರೇಕ್ ಹಾಕಲು ಸರ್ಕಾರ ಮುಂದಾಗಿದೆ. ಅನರ್ಹರನ್ನು ಪಟ್ಟಿಯಿಂದ ಹೊರಗಿಡಲು ಮತ್ತು ನಿಜವಾದ ಫಲಾನುಭವಿಗಳಿಗೆ ಮಾತ್ರ ಯೋಜನೆ ತಲುಪಿಸಲು ಹೊಸದಾಗಿ ಅರ್ಜಿ ಸಲ್ಲಿಕೆಯನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರಿ ಮಟ್ಟದಲ್ಲಿ ಗಂಭೀರ ಚಿಂತನೆ ನಡೆದಿದೆ. ಈ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಗಳಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸುಳಿವು ನೀಡಿದ್ದಾರೆ.
ಭಾನುವಾರ ನಡೆದ ಶಾಸಕರ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸುವಂತೆ ಹಲವು ಸಲಹೆಗಳು ಬಂದಿವೆ. ಯೋಜನೆ ಜಾರಿಯಾದಾಗಿನಿಂದ ಪ್ರಸ್ತುತ ಪಟ್ಟಿಯಲ್ಲಿರುವ ಕೆಲವರು ಮೃತಪಟ್ಟಿದ್ದರೂ, ಅವರ ಹೆಸರಿನಲ್ಲಿ ಬೇರೆಯವರು ಹಣ ಮತ್ತು ಉಚಿತ ವಿದ್ಯುತ್ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇನ್ನು ಕೆಲವರು ಅನರ್ಹರ ಹೆಸರಿನಲ್ಲಿ ತಪ್ಪು ದಾಖಲೆಗಳನ್ನು ನೀಡಿ ನೋಂದಣಿ ಮಾಡಿಕೊಂಡಿದ್ದಾರೆ. ಈ ರೀತಿಯ ಅಕ್ರಮ ಮತ್ತು ದುರುಪಯೋಗದಿಂದಾಗಿ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು ₹100 ಕೋಟಿಗೂ ಅಧಿಕ ನಷ್ಟ (ಸೋರಿಕೆ) ಉಂಟಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದೇನು?
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗ್ಯಾರಂಟಿ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡುವ ತುರ್ತು ಅಗತ್ಯವಿದ್ದು, ಈ ಕುರಿತು ನಾವು ಕೂಲಂಕಷ ಪರಿಶೀಲನೆ ನಡೆಸುತ್ತಿದ್ದೇವೆ.ಮೃತರ ಹೆಸರಲ್ಲಿ ದುರುಪಯೋಗ: “ಯೋಜನೆಯ ಕೆಲವು ಮೂಲ ಫಲಾನುಭವಿಗಳು ಮೃತಪಟ್ಟಿದ್ದರೂ, ಸುಮಾರು 100 ಕೋಟಿಯಷ್ಟು ಹಣ ಬೇರೆಯವರ ಖಾತೆಗಳಿಗೆ ಹೋಗಿ ದುರ್ಬಳಕೆಯಾಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ ಎಂದರು.
ಅನೇಕರು ತಮ್ಮ ಲಿಂಕ್ ಆಗಿದ್ದ ದೂರವಾಣಿ ಸಂಖ್ಯೆಗಳನ್ನು ಬದಲಾಯಿಸಿದ್ದಾರೆ. ಇದರಿಂದಾಗಿ ನಿಜವಾದ ಫಲಾನುಭವಿಗಳಿಗೆ ಸಕಾಲದಲ್ಲಿ ಯೋಜನೆ ತಲುಪುತ್ತಿಲ್ಲ ಎಂಬ ದೂರುಗಳೂ ಇವೆ. ತಾಲ್ಲೂಕು ಮಟ್ಟದಲ್ಲಿ ತನಿಖೆ: “ಈ ದುರುಪಯೋಗವನ್ನು ತಡೆಯಲು ಗ್ಯಾರಂಟಿ ಫಲಾನುಭವಿಗಳ ಹೊಸ ದಾಖಲೆಗಳನ್ನು ಸಂಗ್ರಹಿಸುವ ಬಗ್ಗೆ ಸಲಹೆಗಳು ಬಂದಿದ್ದು, ಪ್ರತಿ ತಾಲ್ಲೂಕಿನಲ್ಲೂ ಇದನ್ನು ಕಟ್ಟುನಿಟ್ಟಾಗಿ ಪರಿಶೀಲಿಸಲಾಗುವುದು, ಎಂದು ಅವರು ವಿವರಿಸಿದ್ದಾರೆ.








