ಕಾರ್ಕಳ, ಮೇ 25: ಅರಣ್ಯ ರಕ್ಷಣೆಯಲ್ಲಿ ಮುಂಚೂಣಿ ಸಿಬ್ಬಂದಿಯ ಪಾತ್ರ ಮಹತ್ವದ್ದಾಗಿದ್ದು, ಅವರ ಸುರಕ್ಷತೆಗಾಗಿ ವಿದ್ಯುತ್ ಪ್ರವಹಿಸುವ ಕೈಗೋಲು (ಸ್ಟಿಕ್), ಮಳೆಯಿಂದ ರಕ್ಷಿಸುವ ಜಾಕೆಟ್, ಶೂ ಇತ್ಯಾದಿ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.
ಕಾರ್ಕಳದಲ್ಲಿಂದು ವಲಯ ಅರಣ್ಯಾಧಿಕಾರಿಗಳ ಕಚೇರಿ ಉದ್ಘಾಟಿಸಿದ ತರುವಾಯ ಅರಣ್ಯ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗೆ ಒದಗಿಸಲಾಗಿರುವ ಆಧುನಿಕ ಮತ್ತು ಹಗುರ ಬಂದೂಕುಗಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಮುಂಚೂಣಿ ಸಿಬ್ಬಂದಿಯ ಸುರಕ್ಷತೆಗೂ ಗಮನ ಹರಿಸುವಂತೆ ತಿಳಿಸಿದರು.
ಆನೆ ಕಾರ್ಯಪಡೆ, ಕಳ್ಳಬೇಟೆ ನಿಗ್ರಹ ಪಡೆ, ಮುಂಜೂಣಿ ಸಿಬ್ಬಂದಿಗಳಿಗೆ ವಸತಿಗೃಹಗಳನ್ನು ನೀಡಲಾಗಿದೆಯೇ ಎಂದೂ ಪ್ರಶ್ನಿಸಿದ ಸಚಿವರು, ಕಷ್ಟಪಟ್ಟು ಅಪಾಯದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಅಪಾಯಭತ್ಯೆ (ರಿಸ್ಕ್ ಅಲೊಯನ್ಸ್) ನೀಡಲಾಗುತ್ತಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವಂತೆ ತಿಳಿಸಿದರು. ನಂತರ ಪ್ರವಾಸಿ ಮಂದಿರಕ್ಕೆ ತೆರಳಿದ ಸಚಿವರು ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಿ ಅಹವಾಲು ಆಲಿಸಿದರು.








