ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಪ್ಯಾನ್ ಕಾರ್ಡ್ (PAN Card) ದುರ್ಬಳಕೆ ಪ್ರಕರಣಗಳು ಗಣನೀಯವಾಗಿ ಹೆಚ್ಚುತ್ತಿವೆ. ಒಬ್ಬರ ಪ್ಯಾನ್ ಕಾರ್ಡ್ ಬಳಸಿ ಮತ್ತೊಬ್ಬರು ಬ್ಯಾಂಕ್ ಖಾತೆ (Bank Account) ತೆರೆಯುವ ವಂಚನೆ ಜಾಲ ಸಕ್ರಿಯವಾಗಿದೆ. ಒಂದು ವೇಳೆ ನಿಮ್ಮ ಹೆಸರಿನಲ್ಲಿ ಅಥವಾ ನಿಮ್ಮ ಪ್ಯಾನ್ ಕಾರ್ಡ್ ಬಳಸಿ ಬೇರೆಯವರು ಖಾತೆ ತೆರೆದರೆ, ನೀವು ಭವಿಷ್ಯದಲ್ಲಿ ದೊಡ್ಡ ಸಂಕಷ್ಟಕ್ಕೆ ಸಿಲುಕಬೇಕಾಗಬಹುದು.
ಬ್ಯಾಂಕ್ ಖಾತೆಯಲ್ಲಿ ನಡೆಯುವ ಎಲ್ಲಾ ಆರ್ಥಿಕ ವಹಿವಾಟುಗಳು ಪ್ಯಾನ್ ಕಾರ್ಡ್ಗೆ ಲಿಂಕ್ ಆಗಿರುತ್ತವೆ. ಹಾಗಾಗಿ, ಆ ಖಾತೆಯಿಂದ ನಡೆಯುವ ಪ್ರತಿಯೊಂದು ಟ್ರಾನ್ಸಾಕ್ಷನ್ ನಿಮ್ಮ ಹೆಸರಿನಲ್ಲೇ ದಾಖಲಾಗುತ್ತದೆ. ಇದರಿಂದಾಗಿ ನೀವು ಅನಗತ್ಯವಾಗಿ ಆದಾಯ ತೇರಿಗೆ (Income Tax) ನೋಟಿಸ್ ಪಡೆಯಬಹುದು ಅಥವಾ ಆ ಖಾತೆಯ ಮೂಲಕ ನಡೆಯುವ ಸೈಬರ್ ವಂಚನೆ ಹಾಗೂ ಅಕ್ರಮ ದಂಧೆಗಳಿಗೆ ನೀವೇ ಹೊಣೆಗಾರರಾಗಿ ಜೈಲು ಪಾಲಾಗುವ ಅಪಾಯವೂ ಇರುತ್ತದೆ.
ವಂಚನೆಯನ್ನು ಪತ್ತೆ ಹಚ್ಚುವುದು ಹೇಗೆ?
ಸಿಬಿಲ್ ಸ್ಕೋರ್ (CIBIL Report) ಪರಿಶೀಲಿಸಿ: ನಿಮ್ಮ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಸಾಲಗಳು (Loans) ಮತ್ತು ಇತರ ಆರ್ಥಿಕ ವಿವರಗಳು ಸಿಬಿಲ್ ವರದಿಯಲ್ಲಿ ಕಾಣಿಸುತ್ತವೆ. ನಿಯಮಿತವಾಗಿ ಸಿಬಿಲ್ ಸ್ಕೋರ್ ಪರಿಶೀಲಿಸುವುದರಿಂದ ನಿಮ್ಮ ಗಮನಕ್ಕೆ ಬಾರದೆ ಇರುವ ಖಾತೆಗಳನ್ನು ಸುಲಭವಾಗಿ ಪತ್ತೆ ಹಚ್ಚಬಹುದು.
ತಕ್ಷಣ ಬ್ಯಾಂಕ್ ಸಂಪರ್ಕಿಸಿ: ನಿಮ್ಮ ಪ್ಯಾನ್ ಬಳಸಿ ಯಾರಾದರೂ ಬೇರೆ ಖಾತೆ ತೆರೆದಿರುವುದು ಕಂಡುಬಂದರೆ, ತಕ್ಷಣವೇ ಸಂಬಂಧಪಟ್ಟ ಬ್ಯಾಂಕ್ಗೆ ಭೇಟಿ ನೀಡಿ ಆ ಖಾತೆಯನ್ನು ಬ್ಲಾಕ್ ಅಥವಾ ಕ್ಲೋಸ್ ಮಾಡಲು ವಿನಂತಿಸಿ.
ಫಾರ್ಮ್ 26AS ಮತ್ತು AIS ಪರಿಶೀಲನೆ: ಆದಾಯ ತೇರಿಗೆ ಇಲಾಖೆಯ Form 26AS ಅಥವಾ Annual Information Statement (AIS) ಪರಿಶೀಲಿಸುವ ಮೂಲಕ ನಿಮ್ಮ ಪ್ಯಾನ್ ಕಾರ್ಡ್ಗೆ ಲಿಂಕ್ ಆಗಿರುವ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ನೋಡಬಹುದು. ಅಲ್ಲಿ ಯಾವುದೇ ಅಪರಿಚಿತ ವಹಿವಾಟು ಕಂಡುಬಂದಲ್ಲಿ ತಕ್ಷಣ ಐಟಿ ಅಧಿಕಾರಿಗಳಿಗೆ ದೂರು ನೀಡಬಹುದು.
ಸೈಬರ್ ಕ್ರೈಂ ದೂರು: ನಿಮಗೆ ತಿಳಿಯದ ಖಾತೆ ಪತ್ತೆಯಾದ ತಕ್ಷಣ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ. ಇದರಿಂದ ಆ ಖಾತೆಯ ಮೂಲಕ ಮುಂದೆ ನಡೆಯಬಹುದಾದ ವಂಚನೆಗಳಿಂದ ನೀವು ಸುರಕ್ಷಿತವಾಗಿರಬಹುದು.
ಈ ಮುನ್ನೆಚ್ಚರಿಕೆಗಳು ಅತ್ಯಗತ್ಯ:
ಅಪರಿಚಿತ ಪತ್ರಗಳ ನಿರ್ಲಕ್ಷ್ಯ ಬೇಡ: ನೀವು ತೆರೆಯದ ಬ್ಯಾಂಕ್ ಖಾತೆಗಳಿಂದ ನಿಮಗೆ ನೋಟಿಸ್ ಅಥವಾ ಪತ್ರಗಳು ಬರುತ್ತಿದ್ದರೆ, ಅದನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಅದು ನಿಮ್ಮ ಪ್ಯಾನ್ ದುರ್ಬಳಕೆಯಾಗಿರುವ ಸ್ಪಷ್ಟ ಸಂಕೇತವಾಗಿದೆ.
ವಿವರಗಳನ್ನು ಹಂಚಿಕೊಳ್ಳಬೇಡಿ: ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಅಥವಾ ಜೆರಾಕ್ಸ್ ಪ್ರತಿಯನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬೇಡಿ.
ನಂಬಿಕಸ್ಥ ಸಂಸ್ಥೆಗಳನ್ನಷ್ಟೇ ಆಯ್ದುಕೊಳ್ಳಿ: ಕೇವಲ ಅಧಿಕೃತ ಮತ್ತು ನಂಬಿಕಸ್ಥ ಬ್ಯಾಂಕ್ ಅಥವಾ ಆರ್ಥಿಕ ಸಂಸ್ಥೆಗಳಿಗೆ ಮಾತ್ರ ನಿಮ್ಮ ಪ್ಯಾನ್ ವಿವರ ನೀಡಿ.
ಅನಧಿಕೃತ ವೆಬ್ಸೈಟ್ಗಳು: ಯಾವುದೇ ಅಪರಿಚಿತ ಅಥವಾ ಅನಧಿಕೃತ ವೆಬ್ಸೈಟ್ಗಳಲ್ಲಿ ನಿಮ್ಮ ಪ್ಯಾನ್ ಕಾರ್ಡ್ ವಿವರಗಳನ್ನು ಅಪ್ಲೋಡ್ ಮಾಡಬೇಡಿ.
ಪ್ಯಾನ್ ಕಾರ್ಡ್ ನಿಮ್ಮ ಅತ್ಯಂತ ಪ್ರಮುಖ ಆರ್ಥಿಕ ದಾಖಲೆಯಾಗಿದ್ದು, ಇದರ ಸುರಕ್ಷತೆ ನಿಮ್ಮ ಜವಾಬ್ದಾರಿಯಾಗಿದೆ. ಸಣ್ಣ ನಿರ್ಲಕ್ಷ್ಯವೂ ನಿಮ್ಮನ್ನು ಸಂಕಷ್ಟಕ್ಕೆ ದೂಡಬಹುದು, ಎಚ್ಚರ!








