ಬೆಂಗಳೂರು : ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು ಏಳು ಮಂದಿ ಸಾವನ್ನಪ್ಪಿದ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಲೋಕಾಯುಕ್ತ ವಿಶೇಷ ತಂಡ, ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಲೋಕಾಯುಕ್ತಕ್ಕೆ ವಿಸ್ತೃತ ವರದಿ ಸಲ್ಲಿಸಿದೆ.
ಏ.29ರಂದು ಗಾಳಿ, ಮಳೆಗೆ ಬೌರಿಂಗ್ ಆಸ್ಪತ್ರೆ ತಡೆಗೋಡೆ ಕುಸಿದು ಬಿದ್ದಿತ್ತು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಸಮಗ್ರ ತನಿಖೆ ನಡೆಸುವಂತೆ ಓರ್ವ ಜಿಲ್ಲಾ ನ್ಯಾಯಾಧೀಶರು, ಇಂಜಿನಿಯರ್ ಹಾಗೂ ಪೊಲೀಸರು ಒಳಗೊಂಡಂತೆ ವಿಶೇಷ ತಂಡ ರಚಿಸಿದ್ದರು.
ಭಾರತೀಯ ಕಟ್ಟಡ ಸಂಹಿತೆ ಪ್ರಕಾರ, ಸಾರ್ವಜನಿಕ ಕಟ್ಟಡಗಳ ಸುತ್ತ 1.5ಮೀ ನಿಂದ 2.4 ಮೀ ಎತ್ತರದ ಗೋಡೆ ಇರಬೇಕು. ಆದರೆ, ಕುಸಿದು ಬಿದ್ದಿರುವ ಗೋಡೆಯ ಎತ್ತರ ಸರಿಸುಮಾರು 2.8 ಮೀಟರ್ ಆಗಿತ್ತು. ಅವೈಜ್ಞಾನಿಕವಾಗಿ ಗೋಡೆ ಹಿಂದೆ 1.8 ಮೀ ಎತ್ತರಕ್ಕೆ ಮಣ್ಣು ತುಂಬಲಾಗಿತ್ತು. ಇದನ್ನು ತಡೆಯುವ ಸಾಮರ್ಥ್ಯ ಅದಕ್ಕೆ ಇರಲಿಲ್ಲ. ಅರ್ಥ್ ರಿಟೈನಿಂಗ್ ಸ್ಚಕ್ಚರ್ ರೀತಿ ಗೋಡೆ ಇರಲಿಲ್ಲ.
ಬದಲಾಗಿ ಸ್ವಂತ ತೂಕ ತಡೆಯುವ ಸಾಮರ್ಥ್ಯವಿತ್ತು. ಸರಾಗವಾಗಿ ಮಳೆನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯಿಲ್ಲ. ಸ್ಥಳದಲ್ಲಿ ನೀರು ಇಂಗುವ ರಂಧ್ರದ ಒತ್ತಡ ಹೆಚ್ಚಾಗಿದೆ. ಗೋಡೆಯಲ್ಲಿ ನೀರು ಸೋರಿಕೆ ತಡೆಯಲು ಹಾಗೂ ನೀರು ಬಸಿಯಲು ಸಣ್ಣ ರಂಧ್ರಗಳೇ ಇಲ್ಲದಿರುವುದು ಪ್ರಮುಖ ಕಾರಣವಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.








