ಬೆಳಗಾವಿ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನಲ್ಲಿ ಸಿನಿಮೀಯ ಮಾದರಿಯಲ್ಲಿ ನಡೆಯುತ್ತಿದ್ದ ಭಾರಿ ಪ್ರಮಾಣದ ಅಕ್ರಮ ಸ್ಪಿರಿಟ್ ಸಾಗಾಟ ಜಾಲವನ್ನು ಅಬಕಾರಿ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ತೈಲ ಸಾಗಿಸುವ ಟ್ಯಾಂಕರ್ನಲ್ಲಿ ಗುಟ್ಟಾಗಿ ಅಡಗಿಸಿಡಲಾಗಿದ್ದ ಬರೋಬ್ಬರಿ 35 ಲಕ್ಷ ರೂಪಾಯಿ ಮೌಲ್ಯದ 14 ಸಾವಿರ ಲೀಟರ್ ಸ್ಪಿರಿಟ್ ಅನ್ನು ಜಪ್ತಿ ಮಾಡುವಲ್ಲಿ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯು ಖಾನಾಪುರ ತಾಲೂಕಿನ ಜಾಂಬೊಟಿ ಗ್ರಾಮದ ಬಳಿ ನಡೆದಿದೆ.
ಡೈವರ್ಟ್ ಮಾಡಲು ‘ಪುಷ್ಪ’ ಚಿತ್ರದ ಐಡಿಯಾ! ಖದೀಮರು ಅಬಕಾರಿ ಮತ್ತು ಪೊಲೀಸ್ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಲು ಸೂಪರ್ ಹಿಟ್ ‘ಪುಷ್ಪ’ ಸಿನಿಮಾದ ಶೈಲಿಯಲ್ಲಿ ಉಪಾಯ ಹೂಡಿದ್ದರು. ಮೇಲ್ನೋಟಕ್ಕೆ ಅದು ಕೇವಲ ಆಯಿಲ್ (ತೈಲ) ಸಾಗಿಸುವ ಟ್ಯಾಂಕರ್ನಂತೆ ಕಾಣಿಸುತ್ತಿತ್ತು. ಟ್ಯಾಂಕರ್ ಒಳಗಡೆ ಮೂರು ಪ್ರತ್ಯೇಕ ಭಾಗಗಳಲ್ಲಿ ಸಣ್ಣ ಪೈಪ್ಗಳನ್ನು ಅಳವಡಿಸಿ, ಅದರಲ್ಲಿ ಮಾತ್ರ ಆಯಿಲ್ ತುಂಬಿಸಲಾಗಿತ್ತು. ಅಧಿಕಾರಿಗಳು ತಪಾಸಣೆ ನಡೆಸಿದಾಗ ಕೇವಲ ಆಯಿಲ್ ಇರುವುದನ್ನು ತೋರಿಸಿ ದಿಕ್ಕು ತಪ್ಪಿಸುವುದು ಇವರ ಪ್ಲಾನ್ ಆಗಿತ್ತು. ಆದರೆ ಆ ಸಣ್ಣ ಪೈಪ್ಗಳ ಸುತ್ತಲಿನ ಖಾಲಿ ಜಾಗದಲ್ಲಿ ಭಾರಿ ಪ್ರಮಾಣದ ಸ್ಪಿರಿಟ್ ಅಡಗಿಸಿಡಲಾಗಿತ್ತು.
ಸಂಶಯ ಬಂದು ಪೈಪ್ ಎಳೆದಾಗ ಸಿಕ್ಕಿಬಿದ್ದ ಗ್ಯಾಂಗ್: ಖಚಿತ ಮಾಹಿತಿಯ ಮೇರೆಗೆ ಖಾನಾಪುರ ಅಬಕಾರಿ ಅಧಿಕಾರಿಗಳು ಜಾಂಬೊಟಿ ಗ್ರಾಮದ ಬಳಿ ಈ ಟ್ಯಾಂಕರ್ ಅನ್ನು ತಡೆದು ತಪಾಸಣೆ ನಡೆಸಿದ್ದಾರೆ. ಆರಂಭದಲ್ಲಿ ಆರೋಪಿಗಳು ಟ್ಯಾಂಕರ್ನಲ್ಲಿ ಕೇವಲ ಆಯಿಲ್ ಇದೆ ಎಂದು ಹೇಳಿ ಅಧಿಕಾರಿಗಳನ್ನು ದಾರಿ ತಪ್ಪಿಸಲು ಯತ್ನಿಸಿದರು. ಆದರೆ ಅಧಿಕಾರಿಗಳಿಗೆ ಟ್ಯಾಂಕರ್ ವಿನ್ಯಾಸದ ಮೇಲೆ ತೀವ್ರ ಅನುಮಾನ ಮೂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಒಳಗಿದ್ದ ಆಯಿಲ್ ಪೈಪ್ಗಳನ್ನು ಹೊರಗೆಳೆದಾಗ, ಅದರ ಸುತ್ತಲೂ ಅಕ್ರಮವಾಗಿ ಅಡಗಿಸಿಟ್ಟಿದ್ದ ಸ್ಪಿರಿಟ್ ಪತ್ತೆಯಾಗಿದ್ದು, ಇಡೀ ಗ್ಯಾಂಗ್ ಸಿಕ್ಕಿಬಿದ್ದಿದೆ.
ನೆಲಮಂಗಲ ಟು ಗೋವಾ ನೆಟ್ವರ್ಕ್: ಪ್ರಾಥಮಿಕ ತನಿಖೆಯ ಪ್ರಕಾರ, ಈ ಅಕ್ರಮ ಸ್ಪಿರಿಟ್ ಟ್ಯಾಂಕರ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಿಂದ ಗೋವಾ ರಾಜ್ಯಕ್ಕೆ ಸಂಚರಿಸುತ್ತಿತ್ತು ಎನ್ನಲಾಗಿದೆ. ನೆಲಮಂಗಲದಿಂದ ಹೊರಟಿದ್ದ ಈ ವಾಹನವು ಬೆಳಗಾವಿ ಗಡಿಯ ಮೂಲಕ ಗೋವಾ ತಲುಪುವ ಯೋಜನೆಯಲ್ಲಿತ್ತು. ಸದ್ಯ ಅಬಕಾರಿ ಅಧಿಕಾರಿಗಳು 14 ಸಾವಿರ ಲೀಟರ್ ಸ್ಪಿರಿಟ್ ಹಾಗೂ ಸಾಗಾಟಕ್ಕೆ ಬಳಸಿದ್ದ ಟ್ಯಾಂಕರ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಓರ್ವನ ಬಂಧನ, ತನಿಖೆ ತೀವ್ರ: ಈ ಜಾಲಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈ ದಂಧೆಯ ಹಿಂದೆ ಇರುವ ಪ್ರಮುಖ ಸೂತ್ರಧಾರಿಗಳು ಯಾರು? ನೆಲಮಂಗಲದಲ್ಲಿ ಈ ಸ್ಪಿರಿಟ್ ಪೂರೈಕೆ ಮಾಡಿದವರು ಯಾರು? ಮತ್ತು ಗೋವಾದಲ್ಲಿ ಇದನ್ನು ಸ್ವೀಕರಿಸಬೇಕಾಗಿದ್ದವರು ಯಾರು? ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕಲು ಅಧಿಕಾರಿಗಳು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿದ್ದಾರೆ.








