ಮಂಡ್ಯ: ಸಾಮಾನ್ಯವಾಗಿ ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಆದರೆ ಮಂಡ್ಯ ಜಿಲ್ಲೆಯ ಈ ಒಂದು ಸರ್ಕಾರಿ ಶಾಲೆ ಗಮನ ಸೆಳೆಯುತ್ತಿದ್ದು, ಖಾಸಗಿ ಶಾಲೆಗಳೂ ಸಹ ತಲೆಬಾಗುವಂತೆ ಮಾಡಿದೆ.
ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ (KPS) ಸದ್ಯ ಇಂತಹದೊಂದು ಅಪರೂಪದ ಹಾಗೂ ಹೆಮ್ಮೆಯ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಈ ಶಾಲೆಯಲ್ಲಿ ತಮ್ಮ ಮಕ್ಕಳಿಗೆ ಸೀಟು ಕೊಡಿಸಲು ಪೋಷಕರು ಮುಂಜಾನೆಯಿಂದಲೇ ಉದ್ದನೆಯ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಕಂಡುಬಂದಿವೆ.
ದಾಖಲಾತಿ ಅರ್ಜಿಗೆ ಮುಗಿಬಿದ್ದ ಜನ
ಹೊಸ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ, ಕೆ.ಆರ್.ಪೇಟೆ ಪಟ್ಟಣದ ಕೆ.ಪಿ.ಎಸ್ (KPS) ಶಾಲೆ ಮುಂದೆ ಪೋಷಕರು ಮುಂಜಾನೆಯಿಂದಲೇ ಕ್ಯೂ ನಿಂತಿದ್ದಾರೆ. ಕೇವಲ ಒಂದು ಅಡ್ಮಿಷನ್ ಫಾರ್ಮ್ಗಾಗಿ ಪೋಷಕರು ಇಷ್ಟೊಂದು ಕಾತರದಿಂದ ಕಾಯುತ್ತಿರುವುದು ಈ ಶಾಲೆಯ ಮೇಲಿರುವ ಕ್ರೇಜ್ ಅನ್ನು ತೋರಿಸುತ್ತದೆ.ಈ ಶಾಲೆಯಲ್ಲಿ ಸೀಟು ಗಿಟ್ಟಿಸಿಕೊಳ್ಳಲು ಕೇವಲ ಸಾಮಾನ್ಯ ಜನ ಅಷ್ಟೇ ಅಲ್ಲದೆ, ಸಾಕಷ್ಟು ಪ್ರಭಾವಿ ವ್ಯಕ್ತಿಗಳಿಂದಲೂ ಶಿಫಾರಸ್ಸು ಪತ್ರಗಳು ಬರುತ್ತಿವೆ ಎಂದರೆ ನೀವು ನಂಬಲೇಬೇಕು.
ಖಾಸಗಿ ಶಾಲೆಗಳಿಗೂ ಸೆಡ್ಡು ಹೊಡೆದ ‘ಕೆಪಿಎಸ್’
ಇತ್ತೀಚಿನ ವರ್ಷಗಳಲ್ಲಿ ಈ ಕರ್ನಾಟಕ ಪಬ್ಲಿಕ್ ಶಾಲೆ (KPS) ಗುಣಮಟ್ಟದ ಶಿಕ್ಷಣ ನೀಡುವಲ್ಲಿ ತಾಲೂಕಿನಲ್ಲೇ ಅತ್ಯಂತ ಮುಂಚೂಣಿಯಲ್ಲಿದೆ. ಖಾಸಗಿ ಕಾನ್ವೆಂಟ್ಗಳಿಗೆ ಪೈಪೋಟಿ ನೀಡುವಂತಹ ಬೋಧನಾ ಶೈಲಿ, ಶಿಸ್ತು ಮತ್ತು ಸರ್ಕಾರದ ಅತ್ಯುತ್ತಮ ಸವಲತ್ತುಗಳು ಈ ಶಾಲೆಯ ಜೀವಾಳವಾಗಿದೆ.
ಗುಣಮಟ್ಟದ ಶಿಕ್ಷಣ: ಅನುಭವಿ ಶಿಕ್ಷಕರಿಂದ ಉತ್ತಮ ಬೋಧನೆ.
ಉಚಿತ ಪಠ್ಯಪುಸ್ತಕ, ಸಮಸ್ತ್ರ, ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ಸರ್ಕಾರದ ಎಲ್ಲಾ ಸೌಲಭ್ಯಗಳ ಸದ್ಬಳಕೆ.ಶಾಲೆಯ ಮೂಲಸೌಕರ್ಯ ಹಾಗೂ ಶೈಕ್ಷಣಿಕ ಪ್ರಗತಿಗೆ ಪೋಷಕರು ಸಂಪೂರ್ಣವಾಗಿ ಮನಸೋತಿದ್ದಾರೆ. ಖಾಸಗಿ ಶಾಲೆಗಳ ಭಾರಿ ಡೊನೇಷನ್ ಹಾವಳಿಗೆ ಬೇಸತ್ತು, ಗುಣಮಟ್ಟದ ಶಿಕ್ಷಣಕ್ಕಾಗಿ ಹುಡುಕುತ್ತಿದ್ದ ಪೋಷಕರಿಗೆ ಕೆ.ಆರ್.ಪೇಟೆಯ ಈ ಕೆ.ಪಿ.ಎಸ್ ಶಾಲೆ ಆಶಾಕಿರಣವಾಗಿ ಮೂಡಿಬಂದಿದೆ. ಸರ್ಕಾರಿ ಶಾಲೆಗಳೂ ಸಹ ಮನಸ್ಸು ಮಾಡಿದರೆ ಮಾದರಿಯಾಗಬಹುದು ಎಂಬುದಕ್ಕೆ ಈ ಶಾಲೆ ಅತ್ಯುತ್ತಮ ಉದಾಹರಣೆಯಾಗಿದೆ.








