ಮಡಿಕೇರಿ: ಕೊಡಗು ಜಿಲ್ಲೆಯ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ (Dubare Elephant Camp) ಪ್ರವಾಸಿ ಮಹಿಳೆ ಹಾಗೂ ಸಾಕಾನೆ ಸಾವನ್ನಪ್ಪಿದ ದಾರುಣ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಅರಣ್ಯ ಅಧಿಕಾರಿಗಳ ವಿರುದ್ಧ ಉಪ ಲೋಕಾಯುಕ್ತರು ಸ್ವಯಂಪ್ರೇರಿತ (Suo Motu) ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೋಮವಾರಪೇಟೆ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಗೋಪಾಲ್ ಎ. ಹಾಗೂ ಕುಶಾಲನಗರ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ (RFO) ರಕ್ಷಿತ್ ಅವರ ವಿರುದ್ಧ ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಪ್ರಕರಣ ದಾಖಲಿಸಿ, ನೋಟಿಸ್ ಜಾರಿ ಮಾಡಿದ್ದಾರೆ.
ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ
ಕಳೆದ ಮೇ 18ರಂದು ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಆನೆಗಳ ನಡುವೆ ಭೀಕರ ಕಾದಾಟ ನಡೆದಿತ್ತು. ಈ ವೇಳೆ ಪ್ರವಾಸಿಗರ ಮೇಲೆ ಆನೆಗಳು ನುಗ್ಗಿದ್ದರಿಂದ ತಮಿಳುನಾಡು ಮೂಲದ ಪ್ರವಾಸಿ ಮಹಿಳೆ ಜುನೇಷೆ ಎಸ್. (33) ಎಂಬುವವರು ಮೃತಪಟ್ಟಿದ್ದರು. ಇದೇ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ‘ಮಾರ್ತಾಡ’ ಎಂಬ ಸಾಕಾನೆ ಕೂಡ ಸಾವನ್ನಪ್ಪಿತ್ತು. ಈ ಇಡೀ ದುರಂತವು ಅರಣ್ಯ ಇಲಾಖೆ ಅಧಿಕಾರಿಗಳ ಕರ್ತವ್ಯ ಲೋಪ ಹಾಗೂ ನಿರ್ಲಕ್ಷ್ಯದ ನೇರ ಪರಿಣಾಮವಾಗಿದೆ ಎಂದು ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅಭಿಪ್ರಾಯಪಟ್ಟಿದ್ದಾರೆ.
ಸಂವಿಧಾನದ 21ನೇ ವಿಧಿಯ ಉಲ್ಲಂಘನೆ
ಮಾಧ್ಯಮ ವರದಿಗಳನ್ನು ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಉಪ ಲೋಕಾಯುಕ್ತರು, ಈ ಘಟನೆಯು ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನ ನೀಡಿರುವ ಜೀವಿಸುವ ಹಕ್ಕಿನ (ವಿಧಿ 21) ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಉಲ್ಲೇಖಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಜನರ ಸುರಕ್ಷತೆಯನ್ನು ಕಾಪಾಡುವುದು ಆಯಾ ಭಾಗದ ಅಧಿಕಾರಿಗಳ ಪರಮ ಜವಾಬ್ದಾರಿಯಾಗಿದೆ ಎಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಈ ಸಂದರ್ಭದಲ್ಲಿ ಅವರು ಪ್ರಸ್ತಾಪಿಸಿದ್ದಾರೆ.
ಜೂನ್ 24ರೊಳಗೆ ವರದಿ ನೀಡಲು ಗಡುವು
ದುಬಾರೆ ಆನೆ ಶಿಬಿರದಲ್ಲಿ ಪ್ರವಾಸಿಗರ ಸುರಕ್ಷತೆಗೆ ಸಂಬಂಧಿಸಿದಂತೆ ಹಲವು ಗಂಭೀರ ಲೋಪದೋಷಗಳಿದ್ದು, ಅವುಗಳನ್ನು ತಕ್ಷಣವೇ ಸರಿಪಡಿಸಬೇಕಿದೆ ಎಂದು ಉಪ ಲೋಕಾಯುಕ್ತರು ಕಠಿಣ ಸೂಚನೆ ನೀಡಿದ್ದಾರೆ. ಅಲ್ಲದೆ, ಆರೋಪಿತ ಇಬ್ಬರೂ ಅರಣ್ಯ ಅಧಿಕಾರಿಗಳು ಜೂನ್ 24ರ ಒಳಗಾಗಿ ಘಟನೆಗೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ಲಿಖಿತ ವಿವರಣೆ ಹಾಗೂ ವರದಿಯನ್ನು ಸಲ್ಲಿಸಬೇಕು ಎಂದು ಆದೇಶಿಸಿದ್ದಾರೆ.
ಪತ್ರಕರ್ತರ ಬಸ್ ಪಾಸ್, ಹೆಲ್ತ್ ಸ್ಕೀಂ ಜಾರಿಗೊಳಿಸಲು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಭರವಸೆ
ಬೆಳಗಾವಿಯ ಮನೆಯಲ್ಲಿ ಗುಂಡು ಹಾರಿಸಿಕೊಂಡು KLE ಆಸ್ಪತ್ರೆ ವೈದ್ಯ ದಿನೇಶ್ ಭಟ್ಕಳ್ ಆತ್ಮಹತ್ಯೆ








