ನವದೆಹಲಿ: ರೋಗಪೀಡಿತ ಬಲ ಕಿಡ್ನಿಯನ್ನು ತೆಗೆಯುವ ಬದಲು, ಮಹಿಳೆಯೊಬ್ಬರ ಸಂಪೂರ್ಣ ಆರೋಗ್ಯಕರವಾಗಿದ್ದ ಎಡ ಕಿಡ್ನಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಉತ್ತರ ಪ್ರದೇಶದ ವೈದ್ಯರೊಬ್ಬರ ಕೃತ್ಯವನ್ನು “ಅತ್ಯಂತ ಘೋರ ನಿರ್ಲಕ್ಷ್ಯ” ಎಂದು ಕರೆದಿರುವ ರಾಷ್ಟ್ರೀಯ ಗ್ರಾಹಕರ ಕುಂದುಕೊರತೆಗಳ ಪರಿಹಾರ ಆಯೋಗವು (NCDRC), ಮೃತಳ ಕುಟುಂಬಕ್ಕೆ 2 ಕೋಟಿ ರೂಪಾಯಿ ಭಾರಿ ಪರಿಹಾರ ನೀಡುವಂತೆ ಆದೇಶಿಸಿದೆ.
ಆಯೋಗದ ಅಧ್ಯಕ್ಷ ಎ.ಪಿ. ಸಾಹಿ ಮತ್ತು ಸದಸ್ಯ ಭರತ್ಕುಮಾರ್ ಪಾಂಡ್ಯ ಅವರನ್ನೊಳಗೊಂಡ ಪೀಠವು, ಮೃತರಾದ 56 ವರ್ಷದ ಶಾಂತಿ ದೇವಿ ಅವರ ಕುಟುಂಬ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿ, ಶಸ್ತ್ರಚಿಕಿತ್ಸೆ ನಡೆಸಿದ ಉತ್ತರ ಪ್ರದೇಶದ ಸರ್ಜನ್ ಡಾ. ರಾಜೀವ್ ಲೋಚನ್ ಅವರನ್ನು ದೋಷಿ ಎಂದು ಘೋಷಿಸಿದೆ.
ಮೇ 18ರಂದು ನೀಡಿರುವ ಆದೇಶದಲ್ಲಿ ಆಯೋಗವು, “ಇದು ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳ ಮುಂದೆ ಬರುವ ಪ್ರಕರಣಗಳಲ್ಲೇ ಅತ್ಯಂತ ಅಪರೂಪದ ಹಾಗೂ ಗಂಭೀರ ಸ್ವರೂಪದ ವೈದ್ಯಕೀಯ ನಿರ್ಲಕ್ಷ್ಯ ಎಂಬುದರಲ್ಲಿ ನಮಗೆ ಯಾವುದೇ ಸಂದೇಹವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಪ್ರಕರಣದ ಹಿನ್ನೆಲೆ: ಏನಾಗಿತ್ತು?
-
ಏಪ್ರಿಲ್ 2012: ಶಾಂತಿ ದೇವಿ ಅವರು ತೀವ್ರ ಹೊಟ್ಟೆನೋವಿನ ಕಾರಣದಿಂದ ಡಾ. ರಾಜೀವ್ ಲೋಚನ್ ಅವರನ್ನು ಸಂಪರ್ಕಿಸಿದ್ದರು. ತಪಾಸಣೆ ನಡೆಸಿದಾಗ ಅವರ ಬಲ ಕಿಡ್ನಿಯಲ್ಲಿ ತೀವ್ರ ಉರಿಯೂತದ ಸಮಸ್ಯೆ (Severe Hydronephrosis) ಇರುವುದು ಪತ್ತೆಯಾಗಿತ್ತು. ಶಸ್ತ್ರಚಿಕಿತ್ಸೆಗೆ ಮುನ್ನ ಮಾಡಿಸಲಾದ ವೈದ್ಯಕೀಯ ವರದಿಗಳಲ್ಲಿ ಇವೆರಡೂ ಕಿಡ್ನಿಗಳು ಯಥಾಸ್ಥಿತಿಯಲ್ಲಿದ್ದವು ಮತ್ತು ಬಲ ಕಿಡ್ನಿ ಮಾತ್ರ ರೋಗಗ್ರಸ್ತವಾಗಿರುವುದು ಸ್ಪಷ್ಟವಾಗಿತ್ತು.
-
ಮೇ 6, 2012: ಬಲ ಕಿಡ್ನಿಯನ್ನು ತೆಗೆಯಲು ಶಸ್ತ್ರಚಿಕಿತ್ಸೆ ನಿಗದಿಯಾಗಿತ್ತು.
-
ಜೂನ್ 2012: ಶಸ್ತ್ರಚಿಕಿತ್ಸೆಯ ನಂತರ ಮಹಿಳೆಗೆ ಮತ್ತೆ ಸಮಸ್ಯೆ ಕಾಣಿಸಿಕೊಂಡಾಗ ನಡೆಸಲಾದ ಸಿಟಿ ಸ್ಕ್ಯಾನ್ ಮತ್ತು ರೇಡಿಯೋಲಾಜಿಕಲ್ ಪರೀಕ್ಷೆಗಳಲ್ಲಿ ಆಘಾತಕಾರಿ ವಿಷಯ ಬೆಳಕಿಗೆ ಬಂದಿತು. ರೋಗಪೀಡಿತ ಬಲ ಕಿಡ್ನಿ ದೇಹದಲ್ಲಿ ಹಾಗೇ ಇತ್ತು, ಆದರೆ ಆರೋಗ್ಯಕರವಾಗಿದ್ದ ಎಡ ಕಿಡ್ನಿ ನಾಪತ್ತೆಯಾಗಿತ್ತು!
ವೈದ್ಯರು ತಮ್ಮ ಲಿಖಿತ ಉತ್ತರದಲ್ಲಿ, “ಬಲ ಭಾಗದಲ್ಲೇ ಶಸ್ತ್ರಚಿಕಿತ್ಸೆಯ ಗಾಯ (Incision) ಮಾಡಲಾಗಿತ್ತು, ಆದರೆ ಹೊರಗೆ ತೆಗೆದದ್ದು ಎಡ ಕಿಡ್ನಿಯನ್ನು” ಎಂದು ತಾವೇ ಒಪ್ಪಿಕೊಂಡಿದ್ದಾರೆ.
‘ವೈದ್ಯಕೀಯ ದುರಂತ’ ಎಂದ ಆಯೋಗ
ಸಂಪೂರ್ಣ ರೋಗದ ಪತ್ತೆ, ಚಿಕಿತ್ಸೆಯ ಯೋಜನೆ ಎಲ್ಲವೂ ಬಲ ಕಿಡ್ನಿಗೆ ಸಂಬಂಧಿಸಿದ್ದಾಗಿದ್ದರೂ ವೈದ್ಯರು ಎಡ ಕಿಡ್ನಿಯನ್ನು ತೆಗೆದಿರುವುದು ಗಂಭೀರ ಅಪರಾಧ ಎಂದು ಆಯೋಗ ಹೇಳಿದೆ. “ಒಬ್ಬ ಅರ್ಹ ವೈದ್ಯನಿಗೆ ತಾನು ತೆಗೆಯುತ್ತಿರುವುದು ಬಲ ಕಿಡ್ನಿಯೋ ಅಥವಾ ಎಡ ಕಿಡ್ನಿಯೋ ಎಂಬುದನ್ನು ಗುರುತಿಸಲು ಸಾಧ್ಯವಾಗದಿರುವುದು ಅಕ್ಷಮ್ಯ ಅಪರಾಧ. ಇದೊಂದು ವೈದ್ಯಕೀಯ ದುರಂತ” ಎಂದು ಪೀಠ ಹೇಳಿದೆ. ಎಡ ಕಿಡ್ನಿ ಸುರಕ್ಷಿತವಾಗಿದ್ದಿದ್ದರೆ ರೋಗಿ ಇನ್ನು ಹೆಚ್ಚಿನ ಕಾಲ ಬದುಕುತ್ತಿದ್ದರು ಎಂದು ಆಯೋಗ ಬೇಸರ ವ್ಯಕ್ತಪಡಿಸಿದೆ.
ಬಲ ಕಿಡ್ನಿ ಹಾಗೇ ಉಳಿದಿದ್ದರಿಂದ ಮಹಿಳೆಯ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸಿತು. ಅವರು ಸುಮಾರು ಎರಡು ವರ್ಷಗಳ ಕಾಲ ನಿರಂತರ ಡಯಾಲಿಸಿಸ್ಗೆ ಒಳಗಾಗಬೇಕಾಯಿತು. ಕೊನೆಗೆ ಫೆಬ್ರವರಿ 20, 2014 ರಂದು ಅವರು ಮೃತಪಟ್ಟರು.
ನಕಲಿ ದಾಖಲೆ ಸೃಷ್ಟಿಸಿದ್ದ ವೈದ್ಯ!
ಈ ಹಿಂದೆ ಉತ್ತರ ಪ್ರದೇಶ ವೈದ್ಯಕೀಯ ಮಂಡಳಿ ಮತ್ತು ಭಾರತೀಯ ವೈದ್ಯಕೀಯ ಮಂಡಳಿ (MCI) ಎರಡೂ ಸಹ ಈ ವೈದ್ಯನನ್ನು ಅಪರಾಧಿ ಎಂದು ಘೋಷಿಸಿದ್ದವು. ವಿಚಾರಣೆ ವೇಳೆ ವೈದ್ಯರು ತಮ್ಮ ಬಚಾವ್ಗಾಗಿ ನಕಲಿ ಕೇಸ್ ಶೀಟ್ ಸೃಷ್ಟಿಸಿ ಸಲ್ಲಿಕೆ ಮಾಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ವೈದ್ಯಕೀಯ ಮಂಡಳಿಯು ವೈದ್ಯರ ನೋಂದಣಿಯನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಿತ್ತು.
ಪರಿಹಾರದ ವಿವರಗಳು:
NCDRC ಆದೇಶದ ಪ್ರಕಾರ ದೂರುದಾರರಿಗೆ ಒಟ್ಟು 2 ಕೋಟಿ ರೂಪಾಯಿ ಪರಿಹಾರ ಸಿಗಲಿದೆ:
-
ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ: 1.5 ಕೋಟಿ ರೂ.
-
ಕುಟುಂಬದ ಪ್ರೀತಿ, ಒಡನಾಟದ ನಷ್ಟಕ್ಕಾಗಿ (Loss of consortium & affection): ತಲಾ 10 ಲಕ್ಷ ರೂ. (ದೂರುದಾರರಿಗೆ)
-
ಕಾನೂನು ವೆಚ್ಚಕ್ಕಾಗಿ: 1 ಲಕ್ಷ ರೂ.
ಬಡ್ಡಿ ಪಾವತಿ ನಿಯಮ: ಈ ಸಂಪೂರ್ಣ ಮೊತ್ತವನ್ನು ಮೂರು ತಿಂಗಳ ಒಳಗಾಗಿ ಪಾವತಿಸಬೇಕು. ಮಹಿಳೆ ಮೃತಪಟ್ಟ ದಿನಾಂಕದಿಂದ (ಫೆಬ್ರವರಿ 20, 2014) ಅನ್ವಯವಾಗುವಂತೆ ವಾರ್ಷಿಕ ಶೇ. 6ರಷ್ಟು ಬಡ್ಡಿಯೊಂದಿಗೆ ಈ ಹಣವನ್ನು ನೀಡಬೇಕು. ಒಂದು ವೇಳೆ ಮೂರು ತಿಂಗಳೊಳಗೆ ಪಾವತಿಸಲು ವಿಫಲವಾದರೆ ಬಡ್ಡಿ ದರವನ್ನು ಶೇ. 9ಕ್ಕೆ ಏರಿಸಲಾಗುವುದು ಎಂದು ಕಡಕ್ ಆದೇಶ ನೀಡಲಾಗಿದೆ.
ಕಾಂಗ್ರೆಸ್ನಲ್ಲಿ ‘ಬೆಕ್ಕು-ಮಂಗನ’ ಜಗಳ; ಸಿಎಂ ಆಗಲು ಖರ್ಗೆ ಕಾಯುತ್ತಿದ್ದಾರೆ: ರಾಧಾಮೋಹನ್ ದಾಸ್ ಅಗ್ರವಾಲ್ ಲೇವಡಿ
JOB ALERT: ರಾಜ್ಯದ ವಿವಿಧ ಇಲಾಖೆ, ನಿಗಮಗಳಲ್ಲಿ ಖಾಲಿ ಇರುವ ‘ಎಂಜಿನಿಯರ್ ಹುದ್ದೆ’ಗಳ ಭರ್ತಿಗೆ ಅರ್ಜಿ ಆಹ್ವಾನ








